ನವದೆಹಲಿ: ಬರ್ಮಿಂಗ್​​ಹ್ಯಾಮ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಒಂದು ಕಡೆ ಭಾರತದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಡ್ ಬೌಲಿಂಗ್ ದಾಳಿಗೆ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿದರೆ, ಮತ್ತೊಂದೆಡೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಕುಸಿತದ ಹಾದಿಯಲ್ಲಿದ್ದ ಭಾರತಕ್ಕೆ ಆಸರೆಯಾದರು. ಈ ಮೂಲಕ ಕೊಹ್ಲಿ ಸಾರ್ವಕಾಲಿಕ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಎಂಬುದನ್ನು ಸಾಬೀತು ಪಡಿಸಿದರು.


COMMERCIAL BREAK
SCROLL TO CONTINUE READING

ಅಲ್ಲದೆ, ಎಜ್​ಬಾಸ್ಟನ್ ಮೈದಾನದಲ್ಲಿ ಗುರುವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಆಂಗ್ಲರ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕದ ಸಾಧನೆ ಮಾಡಿದ್ದಾರೆ. ಭರ್ಜರಿ ಶತಕ ಸಿಡಿಸಿದ ಬಳಿಕ ತಮ್ಮ ಕೊರಳಲ್ಲಿದ್ದ ಚಿನ್ನದ ಮಾಲೆಯನ್ನು ತೆಗೆದು ಚುಂಬಿಸುತ್ತಾ ಪತ್ನಿ ಅನುಷ್ಕಾ ಶರ್ಮಾರನ್ನು ನೆನೆದ ಕ್ಷಣ ಮಧುರವಾಗಿತ್ತು.



ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಅತ್ಯಂತ ಎಚ್ಚರ ವಹಿಸಿ ಇನ್ನಿಂಗ್ಸ್ ಕಟ್ಟಿದ ನಾಯಕ ಕೊಹ್ಲಿ, ತಮ್ಮ ವಿರುದ್ಧ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು. ಅಕ್ಷರಶಃ ಏಕಾಂಗಿ ಹೋರಾಟ ಮಾಡಿದ ಕೊಹ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 149 ರನ್ ಗಳಿಸಿದರಾದರೂ, ಮೊದಲ ಟೆಸ್ಟ್​ ಪಂದ್ಯದ ಮೊದಲನೇ ಇನ್ನಿಂಗ್ಸ್​​ನಲ್ಲಿ ಭಾರತ 274 ರನ್​ಗೆ ಆಲೌಟ್ ಆಗಿ 13 ರನ್​ಗಳ ಹಿನ್ನಡೆ ಅನುಭವಿಸಿತು.