ಧವನ್, ರೋಹಿತ್ ಶತಕ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಏಷಿಯಾ ಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 9 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಪಡೆ ಪಾಕ್ ತಂಡವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಭಾರತದ ಬಿಗು ಬೌಲಿಂಗ್ ಮತ್ತು ಶಿಸ್ತಿನ ಫೀಲ್ಡಿಂಗ್ ಎದುರು ರನ್ ಗಳಿಸಲು ಪಾಕ್ ಬ್ಯಾಟ್ಸ್ ಮನ್ ಗಳು ಪರದಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಾಕ್ ಕಪ್ತಾನ ಸರ್ಫರಾಜ್ ಅಹಮ್ಮದ್ (44) ಮತ್ತು ಅನುಭವಿ ಆಟಗಾರ ಶೋಯಬ್ ಮಲಿಕ್ (78) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಾಕಿಸ್ಥಾನ ಗೌರವಯುತ ಮೊತ್ತವನ್ನು ಪೇರಿಸುವಂತಾಯಿತು. ಉಳಿದಂತೆ ಪಾಕಿಸ್ತಾ'ನ ಪರ ಫಖಾರ್ ಝಮಾನ್ (31), ಆಸಿಫ್ ಅಲಿ (30) ಮಾತ್ರವೇ ಉತ್ತಮ ಆಟವಾಡಿದರು.
ಭಾರತದ ಪರ ಸ್ಪಿನ್ನರ್ ಗಳಾದ ಚಾಹಾಲ್ ಮತ್ತು ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಗಳನ್ನು ಪಡೆದರು. ರನೌಟ್ ರೂಪದಲ್ಲಿ ಇನ್ನೊಂದು ವಿಕೆಟ್ ಬಂದಿತು.
ನಿಗದಿತ 50 ಓವರ್ ಗಳಲ್ಲಿ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿ, ಭಾರತ ಗೆಲ್ಲಲು 238 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಅತ್ಯಂತ ಸುಲಭವಾಗಿ ಪಾಕ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿತು.
ಧವನ್ 109ನೇ ಏಕದಿನ ಪಂದ್ಯದಲ್ಲಿ 95 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನೊಂದಿಗೆ ತಮ್ಮ 15ನೇ ಶತಕ ದಾಖಲಿಸಿದರೆ, ರೋಹಿತ್ 106 ಎಸೆತಗಳಲ್ಲಿ 7ಬೌಂಡರಿ, 3 ಸಿಕ್ಸರ್ ಸಹಾಯದಿಂದ 187ನೇ ಏಕದಿನ ಪಂದ್ಯದಲ್ಲಿ 19ನೇ ಶತಕ ಪೂರ್ಣಗೊಳಿಸಿದರು. ಅಲ್ಲದೆ ರೋಹಿತ್ ಶರ್ಮಾ ಅತಿ ವೇಗವಾಗಿ 7000 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ಆಕರ್ಷಕ ಶತಕದ ನೆರವಿನಿಂದ 39.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮೊದಲ ವಿಕೆಟ್ಗೆ ದ್ವಿಶತಕ ಜೊತೆಯಾಟವಾಡಿದ ಈ ಜೋಡಿ ರನ್ ಚೇಸಿಂಗ್ನಲ್ಲಿ ಭಾರತದ ಪರ ಹೊಸ ದಾಖಲೆಯನ್ನೇ ಬರೆಯಿತು.