ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018ರ ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ 14 ರನ್‌ಗಳಿಂದ ಮಣಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿದೆ.


COMMERCIAL BREAK
SCROLL TO CONTINUE READING

ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 218 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಿಗದಿತ ಓವರ್ ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 204 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.


ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಬೆಂಗಳೂರು ತಂಡದ ಆರಂಭಿಕ ಆಟಗಾರರಾದ ಪಾರ್ಥಿವ್ ಪಟೇಲ್(01) ಹಾಗೂ ನಾಯಕ ವಿರಾಟ್ ಕೊಹ್ಲಿ(12) ಬಹು ಬೇಗ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಗೆ ಮರಳಿದರು. ನಂತರ ಮೈದಾನಕ್ಕಿಳಿದ ಎಬಿ ಡಿವಿಲಿಯರ್ಸ್ ಹಾಗೂ ಮೊಯೀನ್ ಅಲಿ ಜೋಡಿ 3ನೇ ವಿಕೆಟ್​ಗೆ 107 ರನ್​ಗಳ ಜೊತೆಯಾಟ ನೀಡಿದರು. 39 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ 69 ರನ್​ ಸಿಡಿಸಿ ಡಿವಿಲಿಯರ್ಸ್ ಔಟಾದರೆ, ಇದರ ಬೆನ್ನಲ್ಲೆ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸ್​ನೊಂದಿಗೆ 65 ರನ್ ಬಾರಿಸಿದ್ದ ಮೊಯೀನ್ ಅಲಿ ಕೂಡ ನಿರ್ಗಮಿಸಿದರು. ಕೊನೆ ಕ್ಷಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಗ್ರ್ಯಾಂಡ್​ಹೊಮ್​ ಕೇವಲ 17 ಎಸೆತಗಳಲ್ಲಿ 40 ರನ್​ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಆರ್​ಸಿಬಿ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 218 ರನ್​ ಗಳಿಸಿತು. 


ಹೈದರಾಬಾದ್ ಪರವಾಗಿ ರಶಿದ್​ ಖಾನ್​ ಮೂರು ವಿಕೆಟ್, ಸಿದ್ದಾರ್ಥ್​ ಕೌಲ್​ ಎರಡು, ಸಂದೀಪ್​ ಶರ್ಮಾ ಒಂದು ವಿಕೆಟ್​ ಪಡೆದರು.


ಹೈದರಾಬಾದ್ ತಂಡದ ಪರವಾಗಿ ಕೇನ್​ ವಿಲಿಯಮ್ಸನ್​(81) ಮನೀಶ್​ ಪಾಂಡೆ(62) ಹಾಗೂ ಅಲೆಕ್ಸ್​(37) ತಂಡಕ್ಕೆ ಉತ್ತಮ ರನ್ ನೀಡಿದರು. ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 20 ಓವರ್​ ಗಳಲ್ಲಿ 204 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್​ಸಿಬಿ 14 ರನ್​ಗಳ ರೋಚಕ ಜಯ ಸಾಧಿಸಿ, ಮತ್ತೆ ಪ್ಲೇ ಆಫ್ ಗೆ ತೆರಳುವ ತನ್ನ ಕನಸನ್ನು ಜೀವಂತವಾಗಿರಿಸಿಕೊಂಡಿದೆ.