ಕೊರೊನಾ ವಿರುದ್ಧದ ಹೋರಾಟದ ಹಿನ್ನೆಲೆ ಖಾಲಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಏಕದಿನ ಕ್ರಿಕೆಟ್ ಸರಣಿಯನ್ನು ಆಯೋಜಿಸಲು ಪ್ರಸ್ತಾವನೆ ಸಲ್ಲಿಸಿದ ಪಾಕ್ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರನ್ನು ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಲ್ ರೌಂಡರ್ ಕಪಿಲ್ ದೇವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತಕ್ಕೆ ಮೊದಲ ವಿಶ್ವ ಕಪ್ ತಂದುಕೊಟ್ಟ ಕ್ರಿಕೆಟ್ ತಂಡದ ನಾಯಕರಾಗಿದ್ದ ಕಪಿಲ್ ದೇವ್, ಸದ್ಯ ಭಾರತಕ್ಕೆ ಹಣದ ನೆರವಿನ ಅಗತ್ಯತೆ ಇಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿರುವುದು ಹಾಗೂ ಸುರಕ್ಷಿತವಾಗಿರುವುದು ಭಾರತೀಯರ ಅವಶ್ಯಕತೆ. ಕ್ರಿಕೆಟ್ ಆಟಗಾರರ ಪ್ರಾಣವನ್ನು ಪಣಕ್ಕಿಡುವ ಅವಶ್ಯಕತೆ ಇಲ್ಲ ಎಂದು ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಶೋಯೆಬ್ ಅಖ್ತರ್ ಅವರಿಗೆ ತಮ್ಮ ಅಭಿಪ್ರಾಯ ಮಂಡಿಸುವ ಸಂಪೂರ್ಣ ಹಕ್ಕು ಇದೆ ಎಂದು ಹೇಳಿರುವ ಕಪಿಲ್ ಭಾರತಕ್ಕೆ ಹಣದ ಅವಶ್ಯಕತೆ ಇಲ್ಲ. ನಮ್ಮ ಬಳಿ ಸಾಕಷ್ಟು ಹಣವಿದೆ. ಈ ಮಹಾಮಾರಿಯ ವಿರುದ್ಧ ಒಗ್ಗಟ್ಟಾಗಿ ಹೇಗೆ ಹೋರಾಟ ನಡೆಸಬೇಕು ಎಂಬುದು ಸದ್ಯದ ಚಾಲೆಂಜ್ ಎಂದಿದ್ದಾರೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ಪ್ರಧಾನಿ ಪರಿಹಾರ ನಿಧಿಗೆ ಈಗಾಗಲೇ 51 ಕೋಟಿ ರೂ. ಕೊಡುಗೆ ನೀಡಿದ್ದು, ಅವಶ್ಯಕತೆ ಎನಿಸಿದರೆ ಇನ್ನಷ್ಟು ಸಹಾಯ ನೀಡಲು ಮಂಡಳಿ ಬದ್ಧವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಈ ಸರಣಿಯಿಂದ ನೀವು ಎಷ್ಟು ಹಣ ಕಲೆಹಾಕಬಹುದು ಎಂದು ಪ್ರಶ್ನಿಸಿರುವ ಕಪಿಲ್, ಆಟಗಾರರ ಪ್ರಾಣ ಪಣಕ್ಕಿಡುವ ಅವಶ್ಯಕತೆ ಇಲ್ಲ ಮತ್ತು ಮುಂದಿನ ಸುಮಾರು 5-6 ತಿಂಗಳುಗಳ ಅವಧಿಯವರೆಗೆ ಕ್ರಿಕೆಟ್ ಕುರಿತು ಆಲೋಚಿಸುವ ಅಗತ್ಯತೆ ಕೂಡ ಇಲ್ಲ ಎಂದಿದ್ದಾರೆ.