ಬಾಕ್ಸಿಂಗ್ ರಾಷ್ಟ್ರೀಯ ವೀಕ್ಷಕ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ
ನವ ದೆಹಲಿ : ಐದು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿದ್ದ ಎಂ.ಸಿ.ಮೇರಿ ಕೊಂ ಇದೀಗ ಭಾರತೀಯ ಬಾಕ್ಸಿಂಗ್ನ ರಾಷ್ಟ್ರೀಯ ವೀಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಅವರು ಸಕ್ರಿಯ ಕ್ರೀಡಾಪಟುಗಳನ್ನು ಈ ಸ್ಥಾನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಮೇರಿ ಕೋಮ್ ಈ ನಿರ್ಧಾರ ಕೈಗೊಂಡಿದ್ದಾರೆ.
ರಾಥೋಡ್ ಅವರೊಂದಿಗೆ ನಡೆದ ಮಾತುಕತೆಯಂತೆ ನಾನು 10 ದಿನಗಳ ಹಿಂದೆಯೇ ರಾಷ್ಟ್ರೀಯ ವೀಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಈ ಸ್ಥಾನವನ್ನು ತೆರವುಗೊಳಿಸುವಂತೆ ಕೇಳಿದ್ದರಿಂದ ರಾಜಿನಾಮೆ ನೀಡಿದ್ದೇನೆಯೇ ಹೊರತು ನಾನಾಗಿಯೀ ನೀಡಿಲ್ಲ'' ಎಂದು ಮೇರಿ ಕೊಂ ಹೇಳಿದ್ದಾರೆ.
35 ವರ್ಷದ ಓಲಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೊಂ, ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರಿಂದ ಮಾರ್ಚ್ನಲ್ಲಿ ನೇಮಕಗೊಂಡ 12 ರಾಷ್ಟ್ರೀಯ ವೀಕ್ಷಕರಲ್ಲಿ ಒಬ್ಬರಾಗಿದ್ದರು.
ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಡಬಲ್ ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್ ಅವರೂ ಈ ಪಟ್ಟಿಯಲ್ಲಿದ್ದರು.
(PTI)