ನ್ಯೂಯಾರ್ಕ್: 22 ವರ್ಷದ ನವೋಮಿ ಒಸಾಕಾ (Naomi Osaka) ತನ್ನ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯುಎಸ್‌ಟಿಎ ಬಿಲ್ಲಿ ಜೀನ್ಸ್ ಕಿಂಗ್ ನ್ಯಾಷನಲ್ ಟೆನಿಸ್ ಕೇಂದ್ರದಲ್ಲಿ ಆಡಿದ ಫೈನಲ್‌ ಪಂದ್ಯದಲ್ಲಿ ಅವರು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿದ್ದಾರೆ. ನಿರ್ಣಾಯಕ ಪಂದ್ಯದ ಮೊದಲ ಸೆಟ್‌ನಲ್ಲಿ ಸೋತ ನಂತರ, ಒಸಾಕಾ ಎರಡನೇ ಸೆಟ್‌ನ ಆರಂಭದಲ್ಲೂ ಹಿಂದೆ ಬಿದ್ದಿದ್ದರು ಹಾಗೂ ಅಂತಿಮ ಪಂದ್ಯವು ಶೀಘ್ರದಲ್ಲೇಮುಗಿಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಅದರ ನಂತರ ಒಸಾಕಾ ಪಂದ್ಯಕ್ಕೆ ಅಗ್ರೆಸಿವ್ ಆಗಿ ಮರಳಿ ಅಜರೆಂಕಾ ಅವರನ್ನು 1-6, 6-3, 6-3ರಿಂದ ಸೋಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಜಪಾನ್‌ನ ನವೋಮಿ ಒಸಾಕಾ ಎರಡನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದೇ ವೇಳೆ 1994 ರ ನಂತರ ಮಹಿಳಾ ಆಟಗಾರ್ತಿ ಮೊದಲ ಸೆಟ್ ಅನ್ನು ಕಳೆದುಕೊಂಡ ನಂತರ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಜಪಾನಿನ ಆಟಗಾರ್ತಿ ನವೋಮಿ ಒಸಾಕಾ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು 7-6 (1), 3-6, 6-3 ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶ ಮಾಡಿದ್ದರು.


ಈ ಪಂದ್ಯದ ಇನ್ನೊಂದು ವಿಶೇಷತೆ ಎಂದರೆ,  ಅಜರೆಂಕಾ ಮೂರನೇ ಬಾರಿಗೆ ಯುಎಸ್ ಓಪನ್ ಫೈನಲ್ ತಲುಪಿದ್ದರು. ಆದರೆ ಅವರು ಈ ಬಾರಿ ಸೋಲನ್ನು ಎದುರಿಸಬೇಕಾಯಿತು. ಇದಕ್ಕೂ ಮೊದಲು, ಅವರು 2012 ಮತ್ತು 2013 ರಲ್ಲಿ ಯುಎಸ್ ಓಪನ್ ಫೈನಲ್ ತಲುಪಿದರು, ಆದರೆ ಎರಡೂ ಬಾರಿ ಅವರು ಸೆರೆನಾ ವಿಲಿಯಮ್ಸ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು.