ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋತ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಸಂದೇಶ
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು18 ರನ್ಗಳಿಂದ ಸೋಲಿಸಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಫೈನಲ್ ತಲುಪಿದೆ.
ನವದೆಹಲಿ: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್‌ಗಳ ಸೋಲುಂಡ ಭಾರತ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಆಟಗಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನ್ಯೂಜಿಲೆಂಡ್ ವಿರುದ್ಧ 18 ರನ್‌ಗಳ ಸೋಲುಂಡ ಭಾರತ ತಂಡ ಬೇಸರ ಪಡಬೇಕಿಲ್ಲ. ಸೋಲು ಹಾಗೂ ಗೆಲುವುಗಳು ಜೀವನದ ಅವಿಭಾಜ್ಯ ಅಂಗ ಎಂದಿದ್ದಾರೆ.
ಇದೊಂದು ನಿರಾಶಾದಾಯಕ ಫಲಿತಾಂಶ. ಆದರೆ ಅಂತಿಮ ಕ್ಷಣದವರೆಗೂ # ಟೀಮ್ ಇಂಡಿಯಾ ಉತ್ತಮ ಹೋರಾಟ ನಡೆಸಿದೆ. ಪಂದ್ಯಾವಳಿಯುದ್ದಕ್ಕೂ ಭಾರತ ಬ್ಯಾಟಿಂಗ್, ಬೌಲಿಂಗ್, ಉತ್ತಮ ಫೀಲ್ಡಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ.
ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದೆ. ತಂಡದ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.