Ind Vs SL: ವೀರೇಂದ್ರ ಸೆಹ್ವಾಗ್ ವಿರುದ್ಧ ಕುತಂತ್ರ ಮಾಡಿದ್ದ ‘ಲಂಕಾ’ದ ಮನಗೆದ್ದ ರೋಹಿತ್!
Sri Lanka vs India: 2010ರ ಆಗಸ್ಟ್ 16 ರಂದು ಭಾರತ-ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿದ್ದ ಸೆಹ್ವಾಗ್ ಲಂಕಾದ ಕುತಂತ್ರದಿಂದ ಶತಕ ತಪ್ಪಿಸಿಕೊಂಡಿದ್ದರು.
ನವದೆಹಲಿ: ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಕ್ರಿಕೆಟ್ ಲೋಕದಲ್ಲಿ ಡ್ಯಾಷಿಂಗ್ ಓಪನರ್ ಎಂದು ಖ್ಯಾತಿಯಾಗಿರುವ ವೀರೇಂದ್ರ ಸೆಹ್ವಾಗ್ ವಿರುದ್ಧ ಶ್ರೀಲಂಕಾ ಹಿಂದೊಮ್ಮೆ ಕುತಂತ್ರ ಮಾಡಿತ್ತು. ಆದರೆ ಲಂಕಾದ ಕುಂತ್ರವನ್ನು ಮರೆತು ಹಿಟ್‍ಮ್ಯಾನ್ ರೋಹಿತ್ ಶರ್ಮಾ ತೋರಿದ ಕ್ರೀಡಾಸ್ಫೂರ್ತಿಗೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಸೆಹ್ವಾಗ್ ವಿರುದ್ಧ ಲಂಕಾ ಯಾವ ಕುತಂತ್ರ ಮಾಡಿತ್ತು, ರೋಹಿತ್ ಶರ್ಮಾ ಮಾಡಿದ್ದೇನು? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸೆಹ್ವಾಗ್ ವಿರುದ್ಧ ಲಂಕಾ ಕುತಂತ್ರ!
2010ರ ಆಗಸ್ಟ್ 16 ರಂದು ಭಾರತ-ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿದ್ದ ಸೆಹ್ವಾಗ್ ಲಂಕಾದ ಕುತಂತ್ರದಿಂದ ಶತಕ ತಪ್ಪಿಸಿಕೊಂಡಿದ್ದರು. ಪಂದ್ಯದ 35ನೇ ಓವರ್‍ನಲ್ಲಿ ಭಾರತದ ಗೆಲುವಿಗೆ 5 ರನ್ ಬೇಕಿತ್ತು. ಈ ವೇಳೆ ಸೆಹ್ವಾಗ್ ಶತಕ ಗಳಿಸಲು ಕೇವಲ 1 ರನ್ ಅವಶ್ಯವಿತ್ತು. ಆದರೆ ಲಂಕಾ ಬೌಲರ್ ಸೂರಜ್ ರಣದೀವ್ ಎಸೆದ ಮೊದಲ ಎಸೆತ ಬೈ ಆಗಿದ್ದರಿಂದ ಭಾರತದ ಖಾತೆಗೆ 4 ರನ್ ಸಿಕ್ಕಿತ್ತು. ಮುಂದಿನ 2 ಎಸೆತಗಳಲ್ಲಿ ಸೆಹ್ವಾಗ್ ರನ್ ಗಳಿಸಲು ವಿಫಲರಾದರು. ಆದರೆ 5ನೇ ಎಸೆತದಲ್ಲಿ ಸೆಹ್ವಾಗ್ ಅವರು ಸಿಕ್ಸರ್ ಸಿಡಿಸಿ, ಶತಕದ ಜೊತೆಗೆ ಟೀಂ ಇಂಡಿಯಾದ ಗೆಲುವನ್ನು ಸಂಭ್ರಮಿಸುವ ಯೋಚನೆಯಲ್ಲಿದ್ದರು. ಆದರೆ ಆ ಮಹತ್ವದ ಎಸೆತವನ್ನು ರಣದೀವ್ ಬೇಕೆಂದೇ ನೋ ಬಾಲ್ ಎಸೆದುಬಿಟ್ಟಿದ್ದರು. ಇದರಿಂದ ಸೆಹ್ವಾಗ್ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಈ ಕುತಂತ್ರದಿಂದ ಶ್ರೀಲಂಕಾ ತಂಡವು ವ್ಯಾಪಕ ಟೀಕೆಯನ್ನು ಎದುರಿಸಿತ್ತು.
IND vs SL: ಭಾರತದ ಗೆಲುವಿನಲ್ಲಿಯೂ ವಿಲನ್ ಆದದ್ದು ಈ ಆಟಗಾರ! ಯಾಕೆ ಗೊತ್ತಾ?
ಕ್ರೀಡಾಸ್ಫೂರ್ತಿ ಮೆರೆದ ರೋಹಿತ್ ಶರ್ಮಾ!
ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್‍ಗೆ ಎದುರಾಗಿದ್ದ ಸಂದರ್ಭವೇ ಲಂಕಾ ನಾಯಕ ದಸುನ್ ಶಣಕಗೆ ಎದುರಾಗಿತ್ತು. ಈ ಪಂದ್ಯದಲ್ಲಿ ಲಂಕಾಗೆ ಸೋಲು ಫಿಕ್ಸ್ ಆಗಿತ್ತು. ಆದರೆ 50ನೇ ಓವರ್‍ನಲ್ಲಿ 98 ರನ್ ಗಳಿಸಿ ಕ್ರೀಸ್‍ನಲ್ಲಿದ್ದ ಧಸುನ್ ಶಣಕ ಶತಕ ಬಾರಿಸುವ ಆಲೋಚನೆಯಲ್ಲಿದ್ದರು. ಈ ವೇಳೆ ಮೊಹಮ್ಮದ್ ಶಮಿ ಬೇಲ್ಸ್ ಎಗರಿಸಿದ್ದರಿಂದ ಶಣಕ ರನೌಟ್ ಆಗಿದ್ದರು.
ಆದರೆ ಈ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕ್ರೀಡಾಸ್ಫೂರ್ತಿ ಮೆರೆದರು. ಶಣಕರ ರನೌಟ್‍ಗೆ ಅಪೀಲ್ ಮಾಡದೇ ಮೊಹಮ್ಮದ್ ಶಮಿಗೆ ಜೊತೆಗೆ ಮಾತನಾಡಿ ಶಣಕ ಶತಕ ಗಳಿಸಲು ನೆರವಾದರು. ನಂತರದ ಬಾಲ್‍ನಲ್ಲಿಯೇ ಲಂಕಾದ ನಾಯಕ ತಂಡದ ಸೋಲಿನಲ್ಲೂ ಶತಕ ಬಾರಿಸಿದ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾರ ವರ್ತನೆಗೆ ಕ್ರೀಡಾ ಲೋಕದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಇದರ ಜೊತೆಗೆ ಅಂದು ಸೆಹ್ವಾಗ್‍ಗೆ ಲಂಕಾ ಮಾಡಿದ ಕುತಂತ್ರವನ್ನು ನೆನೆಪಿಸಿ ‘We are not same bro’ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: India vs Sri Lanka 1st ODI: ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ
ಲಂಕಾ ವಿರುದ್ಧ ಭರ್ಜರಿ ಗೆಲುವು
ಇನ್ನೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 67 ರನ್‍ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದ ಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ವಿರಾಟ್ ಕೊಹ್ಲಿ(113) ಭರ್ಜರಿ ಶತಕ ಗಳಿಸಿದರು. ರೋಹಿತ್ ಶರ್ಮಾ(83), ಶುಭ್‍ಮನ್ ಗಿಲ್(70), ಕೆ.ಎಲ್.ರಾಹುಲ್(39) ಮತ್ತು ಶ್ರೇಯಸ್ ಅಯ್ಯರ್(28) ರನ್ ಗಳಿಸಿದರು. ಬೃಹತ್ ಟಾರ್ಗೆಟ್ ಬೆನ್ನತ್ತಿದ ಲಂಕಾ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ಲಂಕಾ ಪರ ನಾಯಕ ದಸುನ್ ಶಣಕ(108), ನಿಸಂಕಾ(72), ಧನಂಜಯ ಡಿ ಸಿಲ್ವಾ (47) ಮತ್ತು ಚರಿತ್ ಅಸಲಂಕಾ(23) ರನ್ ಗಳಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.