ಸಾಮಾಜಿಕ ಸಮಸ್ಯೆಗಳ ಕುರಿತಾದ ಸಚಿನ್ ಕಾಳಜಿಗೆ ವಿಶ್ವಸಂಸ್ಥೆಯಲ್ಲಿ ಮೆಚ್ಚುಗೆ
ನವದೆಹಲಿ: ಸಚಿನ್ ತೆಂಡೂಲ್ಕರ್ ಕ್ರಿಕೆಟಿಗೆ ವಿದಾಯ ಹೇಳಿದ ನಂತರ ಹಲವು ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ನಿರತವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.
ಭಾರತದ ಪ್ರತಿನಿಧಿಯಾಗಿರುವ ಶ್ರೀನಿವಾಸ್ ಪ್ರಸಾದ್ ಈ ಕುರಿತಾಗಿ ಮಾತನಾಡುತ್ತಾ "ತೆಂಡೂಲ್ಕರ್ ಸ್ವಚ್ಛ ಭಾರತ ಕಾರ್ಯಕ್ರಮದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಲ್ಲಿನ ಸ್ವಚ್ಛತೆ ಕುರಿತಾಗಿನ ಅವರ ಕಾರ್ಯದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಚತೆಯ ಅಭಿಯಾನ ವಿಸ್ತರಿಸಲು ಸಹಾಯವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಕ್ರೀಡಾ ವಿಕಾಸ ಮತ್ತು ಶಾಂತಿಯ ಕುರಿತಾಗಿನ ಗೋಷ್ಠಿಯಲ್ಲಿ ತಿಳಿಸಿದರು.
ಭಾರತದಲ್ಲಿ ತಾರೆಯರು ಅದರಲ್ಲೂ ಕ್ರಿಕೆಟ್ ತಾರೆಗಳು ನಗರ, ಪಟ್ಟಣ, ಹಳ್ಳಿಯೆನ್ನದೆ ರಾಷ್ಟ್ರವ್ಯಾಪಿ ಸಾಮಾಜಿಕ ವಿಷಯಗಳ ಕುರಿತಾದ ಜಾಗೃತಿಯನ್ನು ಮೂಡಿಸಲು ಮಹತ್ತರ ಪಾತ್ರವನ್ನು ವಹಿಸುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು. ಅಲ್ಲದೆ, ಸಚಿನ್ ಕುರಿತಾಗಿ ಹೇಳುತ್ತಾ "ಶಾಲಾ ಮಕ್ಕಳಿಗೆ ಊಟದ ಮೊದಲು ಕೈಯನ್ನು ಸ್ವಚ್ಛ ಮಾಡಿಕೊಳ್ಳುವ ಕುರಿತಾದ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಸ್ವಚ್ಛ ಭಾರತ ಕಾರ್ಯಕ್ರಮಗಳಲ್ಲಿ ರಾಯಭಾರಿಯಾಗಿ ಜನ ಸಾಮಾನ್ಯರಲ್ಲಿ ಜಾಗೃತಿಮೂಡಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ" ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.