ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದ ಸಂಜಿತಾ ಚಾನು
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್`ನಲ್ಲಿ ನಡೆಯುತ್ತಿರುವ 2018ನೇ ಕಾಮನ್ ವೆಲ್ತ್ ಗೇಮ್ಸ್`ನಲ್ಲಿ ಮಹಿಳೆಯ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಜಿತಾ ಚಾನು ಚಿನ್ನದ ಪದಕ ಗೆದ್ದಿದ್ದಾರೆ.
ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್'ನಲ್ಲಿ ನಡೆಯುತ್ತಿರುವ ಎರಡನೇ ದಿನದ ಕಾಮನ್ ವೆಲ್ತ್ ಗೇಮ್ಸ್'ನಲ್ಲಿ ಮಹಿಳೆಯ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಜಿತಾ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತಕ್ಕೆ ಎರಡು ಚಿನ್ನ, ಒಂದು ಬೆಳ್ಳಿ ಪದಕ ದೊರೆತಂತಾಗಿದೆ.
ಮಹಿಳೆಯರ 53 ಕೆ.ಜಿ. ತೂಕ ಎತ್ತುವ(Weight Lifting) ವಿಭಾಗದಲ್ಲಿ 24 ವರ್ಷ ವಯಸ್ಸಿನ ಸಂಜಿತಾ ಚಾನು ಒಟ್ಟು 192 ಕೆ.ಜಿ. ವೇಟ್ ಲಿಫ್ಟ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
ಉಳಿದಂತೆ 182 ಕೆ.ಜಿ. ವೇಟ್ ಲಿಫ್ಟ್ ಮಾಡಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಎರಡನೇ ಸ್ಥಾನ ಪಡೆದು ಬೆಳ್ಳಿ ಗಳಿಸಿದರೆ, ನ್ಯೂಜಿಲೆಂಡ್'ನ ರಾಚೆಲ್ ಲೆಬ್ಲಾಂಕ್-ಬಾಝಿನೆಟ್ ಅವರು ಒಟ್ಟು 181 ಕೆ.ಜಿ. ವೇಟ್ ಲಿಫ್ಟ್ ಮಾಡುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.
ನಿನ್ನೆ ನಡೆದ 48ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಣಿಪುರದ ಸೈಕೋಮ್ ಮಿರಾಬಾಯಿ ಚಾನು ಅವರು ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.