ಏಷ್ಯನ್ ಗೇಮ್ಸ್ 2018: ಏರ್ ಪಿಸ್ತೂಲ್ನಲ್ಲಿ 16 ವರ್ಷದ ಸೌರಭ್ ಚೌಧರಿಗೆ ಚಿನ್ನ, ಅಭಿಷೇಕ್ ಗೆ ಕಂಚು
ಏಷ್ಯನ್ ಗೇಮ್ಸ್ ನಲ್ಲಿ ಇಂದು ಏರ್ ಪಿಸ್ತೂಲ್ನಲ್ಲಿ ಭಾರತದ ಸೌರಭ್ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ.
ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮೂರನೇ ದಿನವಾದ ಇಂದೂ ಕೂಡ ಭಾರತದ ಚಿನ್ನದ ಬೇಟೆ ಮುಂದುವರೆದಿದೆ. ಇಂದು ನಡೆದಿದ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ 16ರ ಹರೆಯದ ಸೌರಭ್ ಚೌಧರಿ ಚಿನ್ನದ ಪದಕ ಪಡೆದಿದ್ದು, ಅಭಿಷೇಕ್ ವರ್ಮಾ ಕಂಚಿನ ಪದಕ ಪಡೆದಿದ್ದಾರೆ.
ಸೌರಭ್ ಚೌಧರಿ 240.7 ಪಾಯಿಂಟ್ಸ್ ದಾಖಲಿಸಿ ಚಿನ್ನ ಮತ್ತು ಅಭಿಷೇಕ್ ವರ್ಮಾ 219.3 ಪಾಯಿಂಟ್ಸ್ ದಾಖಲಿಸಿ ಕಂಚು ಪಡೆದರು.
ಈ ಸ್ಪರ್ಧೆಯಲ್ಲಿ ಎಲ್ಲರ ಕಣ್ಣು ಹದಿನಾರರ ಹರೆಯದ, ಜ್ಯೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಸೌರಭ್ ಚೌಧರಿ ಮೇಲಿತ್ತು. 2018ರ ಜೂನ್ 26ರಂದು ಜ್ಯೂನಿಯರ್ ಶೂಟಿಂಗ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ 243.7 ಅಂಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಸೌರಭ್,
ಈಗ ಜಕಾರ್ತಾದಲ್ಲಿಯೂ ಅಂತಹುದೇ ಅಮೋಘ ಪ್ರದರ್ಶನ ನೀಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕ್ವಾಲಿಫೈರ್ ಸುತ್ತಿನಲ್ಲಿಯೇ 586 ಅಂಕ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸದ್ಯ ಭಾರತ 2 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಪದಕ ಗೆದ್ದಿದೆ.