ನವದೆಹಲಿ:ಇತ್ತೀಚೆಗಷ್ಟೇ ಹೈದರಾಬಾದ್ ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಎನ್ಕೌಂಟರ್ ನಡೆಸಿದ ಸಂದರ್ಭದಲ್ಲಿ ದೇಶಾದ್ಯಂತ ಸಾರ್ವಜನಿಕರಲ್ಲಿ ಹರ್ಷದ ಅಲೆ ಸೃಷ್ಟಿಯಾಗಿತ್ತು. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯಯಲ್ಲಿ ಮಹಿಳೆಯರು ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಇದೊಂದು ಎನ್ಕೌಂಟರ್ ಪ್ರಕರಣವಾಗಿತ್ತು. ದೇಶಾದ್ಯಂತ ಇನ್ನೂ ಹಲವಾರು ಅತ್ಯಾಚಾರಿಗಳಿದ್ದು, ಒಂದೆಡೆ ಅವರಿಗೆ ಶಿಕ್ಷೆಯಾಗುತ್ತಿಲ್ಲವಾದರೆ ಇನ್ನೊಂದೆಡೆ ಅವರಿಗೆ ಶಿಕ್ಷೆ ನೀಡಲು ನ್ಯಾಯಾಲಯಗಳು ಮೀನಾಮೇಷ ಎಣಿಸುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವಿದೆ. ಸದ್ಯ ದೇಶಾದ್ಯಂತ ನಿರ್ಭಯಾ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಕೂಗು ಕೇಳಿ ಬರುತ್ತಿದೆ. ಈ ಕುರಿತು ಮಾತನಾಡಿರುವ ದೇಶದ ಮಹಿಳಾ ಶೂಟರ್ ವರ್ತಿಕಾ ಸಿಂಗ್ ತಾವು ಸ್ವತಃ ತಮ್ಮ ಕೈಯಾರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಮ್ಮ ರಕ್ತದಿಂದ ಪತ್ರ ಬರೆದಿರುವ ವರ್ತಿಕಾ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವರ್ತಿಕಾ ಸಿಂಗ್ ಓರ್ವ ಶೂಟರ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಮ್ಮ ರಕ್ತದಲ್ಲಿ ಪತ್ರ ಬರೆದು ರವಾನಿಸಿದ್ದಾರೆ. ಪತ್ರದಲ್ಲಿ ನಿರ್ಭಯಾ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಅವಕಾಶ ತಮಗೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.



"ನಿರ್ಭಯಾ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಅವಕಾಶ ನನಗೆ ಕಲ್ಪಿಸಬೇಕು. ಇದರಿಂದ ಮಹಿಳೆಯರೂ ಕೂಡ ಗಲ್ಲುಶಿಕ್ಷೆಯಂತಂಹ ಕಠಿಣ ಶಿಕ್ಷೆಯನ್ನು ವಿಧಿಸುವ ಕ್ಷಮತೆ ಹೊಂದಿದ್ದಾರೆ ಎಂಬ ಬಲವಾದ ಸಂದೇಶ ದೇಶಕ್ಕೆ ನೀಡಿದಂತಾಗುತ್ತದೆ. ನನ್ನ ಈ ಬೇಡಿಕೆಗೆ ಮಹಿಳಾ ಕಲಾವಿದರು ಹಾಗೂ ಸಂಸದರು ಸಮರ್ಥನೆ ನೀಡಬೇಕು ಹಾಗೂ ಇದರಿಂದ ಸಮಾಜದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂಬ ಭರವಸೆ ನನಗಿದೆ" ಎಂದು ವರ್ತಿಕಾ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.


ಇಂದಿಗೆ ಏಳು ವರ್ಷಗಳ ಹಿಂದೆ ಅಂದರೆ 16 ಡಿಸೆಂಬರ್ 2012ರ ರಾತ್ರಿ ಚಲಿಸುತ್ತಿರುವ ಬಸ್ ವೊಂದರಲ್ಲಿ ಆರು ಕಿರಾತಕರು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಈ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ನಂತರ ಸರ್ಕಾರ ಅತ್ಯಾಚಾರಕ್ಕೆ ಸಂಬಂಧಪಟ್ಟ ಕಾನೂನಿನಲ್ಲಿ ಭಾರಿ ಬದಲಾವಣೆ ತಂದಿತ್ತು. ಅತ್ಯಾಚಾರ ಎಸಗಿದ ಆರು ಆರೋಪಿಗಳಲ್ಲಿ ಓರ್ವ ಅಪ್ರಾಪ್ತನಾಗಿದ್ದ. ಆತನನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕಳುಹಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಸದ್ಯ ಓರ್ವ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಉಳಿದ ನಾಲ್ವರು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಈ ಆರೋಪಿಗಳಲ್ಲಿ ಓರ್ವ ಆರೋಪಿ ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ದಾಖಲಿಸಿದ್ದು, ಡಿಸೆಂಬರ್ 17ಕ್ಕೆ ನ್ಯಾಯಾಲಯ ಈ ಅರ್ಜಿಯ ವಿಚಾರಣೆ ನಡೆಸಲಿದೆ.