ಭಾರತೀಯ ವಾಯುಪಡೆ ದಾಳಿಗೆ ಟೀಂ ಇಂಡಿಯಾ ಆಟಗಾರರ ಸೆಲ್ಯೂಟ್!
ಇಂದು ಮುಂಜಾನೆ ಭಾರತೀಯ ವಾಯುಸೇನೆ ಪಾಕ್ ಉಗ್ರ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಭಾರತೀಯ ಕ್ರಿಕೆಟ್ ಆಟಗಾರರು ಪ್ರಶಂಶಿಸಿದ್ದಾರೆ.
ನವದೆಹಲಿ: 10 ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದ ಬಳಿ ನಡೆದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಇಂದು ಮುಂಜಾನೆ ಭಾರತೀಯ ವಾಯುಸೇನೆ ಪಾಕ್ ಉಗ್ರ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಭಾರತೀಯ ಕ್ರಿಕೆಟ್ ಆಟಗಾರರು ಪ್ರಶಂಶಿಸಿದ್ದಾರೆ.
ಕ್ರಿಕೆಟ್ ಮಾತ್ರಿಕ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಶಿಖರ್ ಧವನ್, ರವೀಶ್ ಕುಮಾರ್, ಸುರೇಶ್ ರೈನಾ ಸೇರಿದಂತೆ ಅನೇಕರು ಭಾರತೀಯ ವಾಯುಪಡೆಗೆ ಸಲ್ಯೂಟ್ ಹೊಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, "ನಮ್ಮ ಒಳ್ಳೆಯ ಗುಣಗಳು ಎಂದಿಗೂ ನಮ್ಮ ದೌರ್ಬಲ್ಯ ಆಗಬಾರದು. ಭಾರತೀಯ ವಾಯುಸೇನೆಗೆ ದೊಡ್ಡ ಸೆಲ್ಯೂಟ್, ಜೈಹಿಂದ್" ಎಂದಿದ್ದಾರೆ.
ಪ್ರತೀ ಬಾರಿ ತಮ್ಮ ಮಾತಿನ ಮೂಲಕವೇ ಪಾಕಿಸ್ತಾನವನ್ನ ಕುಟುಕುವ ವಿರೇಂದ್ರ ಸೆಹ್ವಾಗ್ ಕ್ರಿಕೆಟ್ ಸ್ಟೈಲ್ನಲ್ಲಿ ಟ್ವೀಟ್ ಮಾಡಿದ್ದು ನಮ್ಮ ಸೈನಿಕರು ಉತ್ತಮವಾಗಿ ಆಡಿದ್ದಾರೆ, ಎಂದು ಬರೆದುಕೊಂಡು ಸೇನೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು, ಸೈನಿಕರ ಪರ ನಿಲ್ಲುವ ಗೌತಮ್ ಗಂಭೀರ್ ಸಹ ಏರ್ಫೋರ್ಸ್ ದಾಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ ಕೈಗೊಳ್ಳುತ್ತಿರುವ ಭಾರತೀಯ ವಾಯುಪಡೆ ಈಗ ಪಾಕಿಸ್ತಾನದ ನೆಲೆಯೊಳಗೆ ನುಗ್ಗಿ ಬೆಳಗಿನ ಜಾವ 3.30ರ ಸುಮಾರಿಗೆ ಸುಮಾರು 1000 ಕೆ.ಜಿ. ಬಾಂಬ್ ಅನ್ನು ಉಗ್ರರ ನೆಲೆ ಮೇಲೆ ಹಾಕಿ ಧ್ವಂಸ ಮಾಡಿದೆ. 12 ಮಿರಾಜ್ ಯುದ್ಧ ವಿಮಾನಗಳು 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ವಾಪಸ್ ಹಿಂದಿರುಗಿವೆ. ಸದ್ಯ ಭಾರತೀಯ ವಾಯು ಸೇನೆಯ ಈ ವೈಮಾನಿಕ ದಾಳಿಯನ್ನು ಇಡೀ ದೇಶವೇ ಕೊಂಡಾಡಿದೆ.