ಹೈದ್ರಾಬಾದ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಇನ್ನಿಂಗ್ಸ್ ಕಾರಣ ಹೈದ್ರಾಬಾದ್ ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಮಣಿಸಿದೆ. ಶುಕ್ರವಾರ ನಡೆದ ಈ ಪಂದ್ಯದಲ್ಲಿ ವಿಂಡೀಸ್ ತಂಡ 5 ವಿಕೆಟ್ ಕಳೆದುಕೊಂಡು ಭರ್ಜರಿ 207 ರನ್ ಗಳ ಗುರಿ ನೀಡಿತ್ತು . ಈ ಗುರಿ ಬೆನ್ನತ್ತಿದ ಭಾರತ ತಂಡ 19ನೇ ಓವರ್ ನಲ್ಲಿ ಪಂದ್ಯವನ್ನು ಗೆದ್ದು ಸಂಭ್ರಮಾಚರಿಸಿದೆ.


COMMERCIAL BREAK
SCROLL TO CONTINUE READING

ಈ ವೇಳೆ ದೀರ್ಘ ಕಾಲದ ಬಳಿಕ ಮೈದಾನದಲ್ಲಿ ಅಗ್ರೆಸಿವ್ ಆಗಿ ವರ್ತಿಸಿರುವ ನಾಯಕ ವಿರಾಟ್ ಕೊಹ್ಲಿ, 'ನೋಟ್ಬುಕ್ ಸಿಗ್ನೇಚರ್ ಟ್ಯೂನ್' ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ನಾಟಕೀಯ ಬೆಳವಣಿಗೆಗೆ ಕಾರಣವಾದ ಈ ಪಂದ್ಯದಲ್ಲಿ ಕೆರೆಬಿಯನ್ ಬೌಲರ್ ಕೆಸ್ರೆಕ್ ವಿಲಿಯಮ್ಸ್ ಜೊತೆ ವಿರಾಟ್ ಕೊಹ್ಲಿ ಜಟಾಪಟಿ ನಡೆಸಿದ್ದಾರೆ.


ವಿಶ್ರಾಂತಿ ಬಳಿಕ ಬ್ಯಾಟಿಂಗ್ ಗೆ ಇಳಿದ ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ರನ್ ಗಳಿಸಲು ಹೆಣಗಾಡಿದ್ದಾರೆ. ಈ ವೇಳೆ ಕೆರೆಬಿಯನ್ ಬೌಲರ್ ಗಳು ಅವರ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಅಷ್ಟೇ ಅಲ್ಲ ವಿಂಡೀಸ್ ಬೌಲರ್ ಗಳಾದ ಶೆಲ್ಡನ್ ಕಾಟ್ರೆಲ್ ಹಾಗೂ ಕೆಸ್ರೆಕ್ ವಿಲಿಯಮ್ಸ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ನಲ್ಲಿ ಭಾಗಿಯಾಗಿದ್ದಾರೆ.


ಇದಕ್ಕೆ ತಮ್ಮ ಬ್ಯಾಟ್ ನಿಂದಲೇ ತಕ್ಕ ಉತ್ತರ ನೀಡಿರುವ ಕೊಹ್ಲಿ, ಪಂದ್ಯದ 16ನೇ ಓವರ್ ನಲ್ಲಿ ವಿಲಿಯಮ್ಸ್ ಅವರ ಮೂರನೇ ಎಸೆತದಲ್ಲಿ ಮಿಡ್ ವಿಕೆಟ್ ನತ್ತ ಸಿಕ್ಸರ್ ಬಾರಿಸಿ ವಿಲಿಯಮ್ಸ್ ಅವರನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಜೊತೆಗೆ ನೋಟ್ಬುಕ್ ಶೈಲಿಯಲ್ಲಿ ವಿಚಿತ್ರವಾಗಿ ಸಂಭ್ರಮಾಚಿಸುವ ಮೂಲಕ ವಿಲಿಯಮ್ಸ್ ಗೆ ತಕ್ಕ ಉತ್ತರ ನೀಡಿದ್ದಾರೆ. ಪ್ರಸ್ತುತ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.



ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅಜೇಯ 94 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೊಹ್ಲಿ ಅವರು ತಮ್ಮ ಈ ವರ್ತನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “2017ರಲ್ಲಿ ನನ್ನ ವಿಕೆಟ್ ಕಬಳಿಸಿದ ವಿಲಿಯಮ್ಸ್, ನೋಟ್ಬುಕ್ ಶೈಲಿಯಲ್ಲಿ ಸಂಭ್ರಮಾಚರಿಸಿದ್ದರು. ಹೀಗಾಗಿ ನಾನೂ ಕೂಡ ಅವರಿಗೆ ಅವರದೇ ಆದ ಶೈಲಿಯಲ್ಲಿ ಉತ್ತರಿಸಿರುವುದಾಗಿ" ಹೇಳಿದ್ದಾರೆ.