`ಖೇಲ್ ರತ್ನ` ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ, ಮೀರಾಬಾಯಿ ಚಾನು
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕಾಮನ್ ವೆಲ್ತ್ ಗೇಮ್ಸ್'ನಲ್ಲಿ ವೇಯ್ಟ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಮೀರಾಬಾಯಿ ಚಾನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದರು.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟೀಂ ಇಂಡಿಯಾ ನಾಯಕ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 23 ಶತಕ ಮತ್ತು 19 ಅರ್ಧ ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದರು. 1997ರಲ್ಲಿ ಸಚಿನ್ ತೆಂಡೂಲ್ಕರ್, 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಕ್ರಿಕೆಟ್ನಲ್ಲಿನ ಸಾಧನೆಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಗಳಿಸಿದ ಮೂರನೇ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಮತ್ತೊಂದೆಡೆ ಇತ್ತೀಚೆಗೆ ನಡೆದ ಕಾಮನ್ ವೆಲ್ತ್ ಗೇಮ್ಸ್'ನ 48 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಸಾಧನೆ ಮೆರೆದಿದ್ದ 24 ವರ್ಷದ ಮೀರಾಬಾಯಿ ಚಾನು ಅವರಿಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ.
ಅಷ್ಟೇ ಅಲ್ಲದೆ, ಏಷಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ ಓಟಗಾರ್ತಿ ಹಿಮಾದಾಸ್ ಸೇರಿದಂತೆ 20 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಮತ್ತು ಬಾಕ್ಸಿಂಗ್ ಕೋಚ್ ಕನ್ನಡಿಗ ಚೆನಂದ ಅಚ್ಚಯ್ಯ ಕುಟ್ಟಪ್ಪ, ವೇಟ್ ಲಿಫ್ಟರ್ ಕೋಚ್ ವಿಜಯ್ ಶರ್ಮಾ ಸೇರಿದಂತೆ 8 ಕ್ರೀಡಾ ಮಾರ್ಗದರ್ಶಕರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದರು.