ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊನೆಗೂ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸ್ಥಾನ ಪಡೆದ ಆರನೇ ಭಾರತೀಯ ಕ್ರಿಕೆಟ್ ಆಟಗಾರ ಎನ್ನುವ ಖ್ಯಾತಿ ಪಡೆದರು.ಸಚಿನ್ ಜೊತೆಗೆ ಈ ಸ್ಥಾನ ಪಡೆದ ಆಟಗಾರರೆಂದರೆ ದಕ್ಷಿಣ ಆಫ್ರಿಕಾದ ವೇಗದ ದಂತಕಥೆ ಅಲನ್ ಡೊನಾಲ್ಡ್ ಮತ್ತು ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗಾರ್ತಿ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್.  



COMMERCIAL BREAK
SCROLL TO CONTINUE READING

ಇನ್ನು ಭಾರತದ ಪರವಾಗಿ ಇದುವರಿಗೆ ಈ ಗರಿಯನ್ನು ಬಿಷನ್ ಸಿಂಗ್ ಬೇಡಿ (2009), ಕಪಿಲ್ ದೇವ್ (2009), ಸುನಿಲ್ ಗವಾಸ್ಕರ್ (2009), ಅನಿಲ್ ಕುಂಬ್ಳೆ (2015) ಮತ್ತು ರಾಹುಲ್ ದ್ರಾವಿಡ್ (2018) ಮುಡಿಗೇರಿಸಿಕೊಂಡಿದ್ದಾರೆ.ಇದುವರೆಗೆ ಒಟ್ಟು 87 ಕ್ರಿಕೆಟಿಗರನ್ನು ಈ ವಿಶೇಷ ಕ್ಲಬ್‌ಗೆ ಸೇರಿಸಲಾಗಿದೆ.ಅದರಲ್ಲಿ ಇಂಗ್ಲೆಂಡ್‌ನಿಂದ 28, ಆಸ್ಟ್ರೇಲಿಯಾದಿಂದ 26 ಮತ್ತು ವೆಸ್ಟ್ ಇಂಡೀಸ್‌ನ 18 ಕ್ರಿಕೆಟಿಗರನ್ನು ಸೇರಿಸಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಐದು , ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ ಮೂರು ಮತ್ತು ಶ್ರೀಲಂಕಾ ಈ ಕ್ಲಬ್‌ಗೆ ಒಬ್ಬ ಆಟಗಾರನನ್ನು ಆಯ್ಕೆ ಮಾಡಲಾಗಿದೆ.



ಸಚಿನ್ ಗೂ ಮೊದಲು, ಐವರು ಭಾರತೀಯರನ್ನು ಈ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ ಮತ್ತು ರಾಹುಲ್ ದ್ರಾವಿಡ್ ಅವರನ್ನು ‘ಮಾಸ್ಟರ್ ಬ್ಲಾಸ್ಟರ್’ ಗೂ ಮೊದಲು ಆಯ್ಕೆ ಮಾಡಲಾಗಿದೆ. ಆದರೆ ಈ ಗರಿಯನ್ನು ಮುಡಿಗೇರಿಸಿಕೊಳ್ಳಲು ಐಸಿಸಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಿದೆ.ಈ ವಿಶೇಷ ಕ್ಲಬ್‌ಗೆ ಅರ್ಹತೆ ಪಡೆಯಲು ಒಬ್ಬ ಬ್ಯಾಟ್ಸ್‌ಮನ್, ಅವರು ಎರಡು ಪ್ರಮುಖ ಸ್ವರೂಪಗಳಲ್ಲಿ (ಏಕದಿನ ಮತ್ತು ಟೆಸ್ಟ್) ಕನಿಷ್ಠ 8,000 ರನ್ ಮತ್ತು 20 ಶತಕಗಳನ್ನು ಗಳಿಸಿರಬೇಕು. ಬೌಲರ್‌ನಂತೆ, ಅವರು ಕನಿಷ್ಠ 200 ವಿಕೆಟ್‌ಗಳನ್ನು ಕಬಳಿಸಿರಬೇಕು ಮತ್ತು ಅವರ ಸ್ಟ್ರೈಕ್ ರೇಟ್ ಟೆಸ್ಟ್‌ನಲ್ಲಿ 50 ಮತ್ತು ಏಕದಿನ ಪಂದ್ಯಗಳಲ್ಲಿ 30 ಆಗಿರಬೇಕು. 


ಈ ಮೇಲಿನ ನಿಯಮಗಳ ಪ್ರಕಾರ, ಸಚಿನ್ ಮತ್ತು ದ್ರಾವಿಡ್ ಇಬ್ಬರೂ ಕ್ಲಬ್‌ಗೆ ಅರ್ಹತೆ ಪಡೆದಿದ್ದಾರೆ ಆದರೆ ಇನ್ನೂ ಒಂದು ಮಾನದಂಡವನ್ನು ಪೂರೈಸಬೇಕಾಗಿದೆ. ಐದು ವರ್ಷಗಳ ನಿವೃತ್ತಿಯನ್ನು ಪೂರ್ಣಗೊಳಿಸಿದ ನಂತರವೇ ಒಬ್ಬ ಕ್ರಿಕೆಟಿಗ ಈ ಶ್ರೇಷ್ಠ ಪ್ರಶಸ್ತಿಗೆ ಅರ್ಹನಾಗುತ್ತಾನೆ.ಈ ಹಿನ್ನಲೆಯಲ್ಲಿ ದ್ರಾವಿಡ್ ಮತ್ತು ಕುಂಬ್ಳೆ ನಂತರ ಅವರಿಗೆ ಈ ಪ್ರಶಸ್ತಿ ದೊರೆತಿದೆ.