ನವದೆಹಲಿ: 2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್ ನ್ನು ಸೇರಿಸಲು ಸಿಜಿಎಫ್ ಗುರುವಾರ  ನಾಮ ನಿರ್ದೇಶನ ಮಾಡಿದೆ.ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ನ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ನಾಮನಿರ್ದೇಶನ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ನವೆಂಬರ್‌ನಲ್ಲಿ ತಮ್ಮ ಬಿಡ್ ಸಲ್ಲಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ನಿರ್ಧಾರವನ್ನು ಸ್ವಾಗತಿಸಿವೆ.


"ಸಿಜಿಎಫ್ ಸದಸ್ಯರಿಂದ ಅನುಮೋದನೆ ಪಡೆಯಬೇಕಾದ ಈ ನಿರ್ಧಾರವು ಸಮಗ್ರ ಬಿಡ್ಡಿಂಗ್ ಪ್ರಕ್ರಿಯೆಯನ್ನು ಅನುಸರಿಸುತ್ತದೆ, ಅಲ್ಲಿ ಐಸಿಸಿ, ಇಸಿಬಿಯ ಸಹಭಾಗಿತ್ವದಲ್ಲಿ, ಮಹಿಳಾ ಕ್ರಿಕೆಟ್ ಕಾಮನ್ವೆಲ್ತ್ ಕ್ರೀಡಾಕೂಟದ ಕ್ರೀಡಾ ಕಾರ್ಯಕ್ರಮದ ಭಾಗವಾಗಲು ಪ್ರಸ್ತುತಪಡಿಸಿದೆ" ಎಂದು ಐಸಿಸಿ ಹೇಳಿದೆ. 1998 ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ನ್ನು ಆಡಿಸಲಾಗಿತ್ತು."ಬರ್ಮಿಂಗ್ ಹ್ಯಾಮ್  2022 ರಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಗಾಗಿನ ಅರ್ಜಿಯು ಪ್ರಪಂಚದಾದ್ಯಂತದ ಕ್ರಿಕೆಟ್ ಗೆ ಮಹಿಳೆಯರನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವ ಜಾಗತಿಕ ಮಹತ್ವಾಕಾಂಕ್ಷೆಯ ಭಾಗವಾಗಿದೆ" ಎಂದು ಐಸಿಸಿ ಹೇಳಿದೆ.


ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಈ ಬಗ್ಗೆ ಮಾತಾನಾಡುತ್ತಾ  "ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್ ನಾಮನಿರ್ದೇಶನಗೊಂಡಿರುವುದಕ್ಕೆ ನಾವು ಸಂತೋಷಪಡುತ್ತೇವೆ. ನಾಮನಿರ್ದೇಶನಕ್ಕಾಗಿ ನಾನು ಸಿಜಿಎಫ್ ಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಕುಟುಂಬದ ಭಾಗವಾಗಲು ಇದು ನಿಜವಾದ ಗೌರವದ ಸಂಗತಿ "ಎಂದು ಹೇಳಿದರು. ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್‌ನೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಸಮಾನತೆ, ನ್ಯಾಯಸಮ್ಮತತೆ ಮತ್ತು ಅವಕಾಶವನ್ನು ತಲುಪಿಸುವ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಹಂಚಿಕೊಳ್ಳುತ್ತೇವೆ ಎಂದರು. 


ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಮಾತನಾಡಿ "ಮಹಿಳಾ ಕ್ರಿಕೆಟ್‌ನ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಲು ಈ ಕ್ರೀಡಾಕೂಟದ ಜಾಗತಿಕ ವ್ಯಾಪ್ತಿಯನ್ನು ಲಾಭ ಮಾಡಿಕೊಳ್ಳಲು ಇದು ಒಂದು ಅದ್ಭುತವಾದ ಅವಕಾಶವನ್ನು ಒದಗಿಸುತ್ತದೆ ಮತ್ತು ಹಾಗೆ ಮಾಡುವುದರಿಂದ ಹೊಸ ತಲೆಮಾರಿನ ಮಹಿಳೆಯರನ್ನು ಪ್ರೇರೇಪಿಸುತ್ತದೆ ಎಂದರು.