ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ
ಐದು ಬಾರಿ ಚಾಂಪಿಯನ್ ತಂಡವು ಐಸಿಸಿ ಕ್ರಿಕೆಟ್ ವಿಶ್ವಕಪ್ (2019) ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.
ನವದೆಹಲಿ: ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಐಸಿಸಿ ಕ್ರಿಕೆಟ್ ವಿಶ್ವಕಪ್ (2019) ಸೆಮಿಫೈನಲ್ ಪ್ರವೇಶಿಸಿದೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತವರು ನೆಲದಲ್ಲಿಯೇ ಇಂಗ್ಲೆಂಡ್‌ನ್ನು ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆಸಿಸ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 20 ವರ್ಷಗಳ ಬಳಿಕ ತವರು ನೆಲದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಗೇರಲು ಇನ್ನುಳಿದ 2 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಮಂಗಳವಾರ ನಡೆದ ವಿಶ್ವಕಪ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು 64 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಆರಿಸಿಕೊಂಡ ಆಸಿಸ್ ಏಳು ವಿಕೆಟ್‌ಗಳಲ್ಲಿ 285 ರನ್ ಗಳಿಸಿದರು. ಕ್ಯಾಪ್ಟನ್ ಆರನ್ ಫಿಂಚ್ ಶತಕ ಬಾರಿಸಿದರು. ಬಳಿಕ ಆಸಿಸ್ ನೀಡಿದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಆಟ ಆರಂಭದಲ್ಲೇ ಕಳಪೆಯಾಗಿತ್ತು. ಶೂನ್ಯ ಸ್ಕೋರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 221 ರನ್‌ಗಳಿಗೆ ಆಲೌಟ್ ಆದರು.
ಈ ವಿಶ್ವಕಪ್‌ನಲ್ಲಿ ಆಡಿರುವ ಒಟ್ಟು ಏಳು ಪಂದ್ಯಗಳಲ್ಲಿ ಇದು ಆಸ್ಟ್ರೇಲಿಯಾದ ಆರನೇ ಗೆಲುವು. ಅದರೊಂದಿಗೆ ಅವರು 12 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನ ಅಗ್ರಸ್ಥಾನವನ್ನು ತಲುಪಿದ ಆಸಿಸ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ನ್ಯೂಜಿಲೆಂಡ್ 11 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಭಾರತ 9 ಅಂಕಗಳೊಂದಿಗೆ ಮೂರನೇ ಮತ್ತು ಇಂಗ್ಲೆಂಡ್ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳಾ (ನ್ಯೂಜಿಲೆಂಡ್ ಮತ್ತು ಭಾರತ) ಸೆಮಿಫೈನಲ್ ಪಂದ್ಯಕ್ಕೆ ಲಗ್ಗೆಯಿಡಲು ತಯಾರಾಗಿವೆ.