ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಘೋಷಿಸಿದ ಸಿಕ್ಸರ್ ಸರದಾರ ಯವರಾಜ್ ಸಿಂಗ್
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 40 ಟೆಸ್ಟ್ ಮತ್ತು 304 ಏಕದಿನ ಪಂದ್ಯಗಳನ್ನು ಆಡಿರುವ ಯುವರಾಜ್, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.
ನವದೆಹಲಿ: ಪ್ರಸಿದ್ಧ ಕ್ರಿಕೆಟಿಗ ಮತ್ತು 2011 ರ ವಿಶ್ವಕಪ್ ವಿಜಯದ ರೂವಾರಿ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 40 ಟೆಸ್ಟ್ ಮತ್ತು 304 ಏಕದಿನ ಮತ್ತು 58 T20 ಪಂದ್ಯಗಳನ್ನು ಆಡಿದ ಯುವರಾಜ್, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವರಾಜ್ ಸಿಂಗ್, "ಜೀವನದಲ್ಲಿ ಹೇಗೆ ಹೋರಾಡಬೇಕು, ಬಿದ್ದಾಗ ಹೇಗೆ ಮೇಲೇಳಬೇಕು ಎಂಬುದನ್ನು ಈ 25 ವರ್ಷಗಳ ಕ್ರಿಕೆಟ್ ಜೀವನ, 17 ವರ್ಷಗಳವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ನನಗೆ ಕಲಿಸಿದೆ" ಎಂದಿದ್ದಾರೆ.
ವಿಶ್ವಕಪ್ ಜಯಿಸುವುದು ನನ್ನ ಗುರಿಯಾಗಿತ್ತು:
ಒಂದೇ ಓವರಿನಲ್ಲಿ ಆರು ಸಿಕ್ಸರ್ ಸಿಡಿಸಿ ಸಿಕ್ಸರ್ ಗಳ ಸರದಾರ ಎಂದೆನಿಸಿದ್ದ ಯುವರಾಜ್ ಸಿಂಗ್ 2011ರ ವಿಶ್ವಕಪ್ ನಲ್ಲಿ ತಮ್ಮ ಅಮೋಘ ಆಟ ಪ್ರದರ್ಶಿಸಿದ್ದರು. ಇಂದು ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಅವರು, ನಾನೆಂದೂ 10 ಸಾವಿರ ರನ್ ಗಳಿಸುವ ಬಗ್ಗೆ ಯೋಚನೆಯೂ ಮಾಡಿರಲಿಲ್ಲ. ಆದರೆ, ವಿಶ್ವಕಪ್ ಜಯಿಸುವುದು ನನ್ನ ಗುರಿಯಾಗಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡದೇ ಇರುವುದಕ್ಕೆ ಇನ್ನೂ ನನಗೆ ಬೇಸರವಿದೆ. ಆದರೆ ಇನ್ನು 40 ಟೆಸ್ಟ್ ಆಡುವ ಅವಕಾಶ ಸಿಕ್ಕಿದ್ದರೆ ಚಿತ್ರಣವೇ ಬದಲಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
37ರ ಹರೆಯದ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರೂ, ಐಸಿಸಿ-ಮಾನ್ಯತೆ ಪಡೆದ ವಿದೇಶಿ ಟ್ವೆಂಟಿ -20 ಲೀಗ್ನಲ್ಲಿ ಸ್ವತಂತ್ರ ವೃತ್ತಿಜೀವನವನ್ನು ಮುಂದುವರೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.