ಬಾಹ್ಯಾಕಾಶ ಲೋಕ ಎಷ್ಟು ವಿಸ್ತಾರವಾಗಿದೆ ಎಂದರೆ, ಅದನ್ನ 'ಅನಂತ'  ಎಂಬ ಪದದ ಮೂಲಕ ಗುರುತಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ನಮ್ಮ ವಿಶ್ವಕ್ಕೆ ಕೊನೆಯೇ ಇಲ್ಲವೆಂದು. ಆದರೆ ವಿಶ್ವದ ಮೂಲೆ ಮೂಲೆಗೂ ಹೋಗಿ ಬರಲು ಮಾನವನಿಗೆ ಸಾಧ್ಯವಿಲ್ಲ. ಇನ್ನೂ ಅಷ್ಟು ಬೆಳೆದಿಲ್ಲ ಮಾನವ. ಆದರೆ ಭೂಮಿಯಿಂದಲೇ ಕೋಟ್ಯಂತರ ಕಿಲೋಮೀಟರ್‌ ದೂರದ ಗ್ರಹ ಹಾಗೂ ನಕ್ಷತ್ರಗಳನ್ನು ಗುರುತಿಸಬಲ್ಲ ಶಕ್ತಿ ಮಾನವರಿಗಿದೆ. ಅದರಲ್ಲೂ ನಾಸಾ ಸಂಸ್ಥೆ ಹಾರಿಬಿಟ್ಟ 'ಜೇಮ್ಸ್ ವೆಬ್' ಸಂಚಲ ಸೃಷ್ಟಿಸಿದೆ. 'ಜೇಮ್ಸ್ ವೆಬ್' ಬಾಹ್ಯಾಕಾಶ ತಲುಪಿದ ಮರುಕ್ಷಣವೇ ಮಾನವರ ಇತಿಹಾಸ ಬದಲಾಗುತ್ತಿದೆ. ಇದೀಗ ನಮ್ಮ ಗುರುಗ್ರಹದ ರೀತಿ ಇರುವ ಮತ್ತೊಂದು ಗ್ರಹ ಪತ್ತೆ ಮಾಡಿದೆ 'ಜೇಮ್ಸ್ ವೆಬ್'.


COMMERCIAL BREAK
SCROLL TO CONTINUE READING

'ಜೇಮ್ಸ್ ವೆಬ್' ಬಾಹ್ಯಾಕಾಶ ದೂರದರ್ಶಕ ಅಥವಾ ಸ್ಪೇಸ್‌ ಟೆಲಿಸ್ಕೋಪ್‌ ಹೊಸ ಇತಿಹಾಸವನ್ನೇ ನಿರ್ಮಿಸುತ್ತಿದೆ. ಈ ಹಿಂದೆ 'ಹಬಲ್' ಟೆಲಿಸ್ಕೋಪ್‌‌ ಮಾಡಿದ್ದ ಕೆಲಸಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಕೆಲಸ ಮಾಡುವ ಶಕ್ತಿ 'ಜೇಮ್ಸ್ ವೆಬ್'ಗೆ ಇದೆ. ಈ ಕಾರಣಕ್ಕೆ ಸಾವಿರಾರು ಕೋಟಿ ಖರ್ಚು ಮಾಡಿದ್ದ ನಾಸಾ ಪ್ರಬಲವಾದ 'ಜೇಮ್ಸ್ ವೆಬ್' ಟೆಲಿಸ್ಕೋಪ್‌ ಹಾರಿಬಿಟ್ಟಿತ್ತು. 'ಜೇಮ್ಸ್ ವೆಬ್' ಕಾರ್ಯಾಚರಣೆ ಆರಂಭಿಸಿ ಇನ್ನೂ 2 ತಿಂಗಳು ಕಳೆದಿಲ್ಲ, ಆಗಲೇ ಗಿಫ್ಟ್‌ ಮೇಲೆ ಗಿಫ್ಟ್ ಕೊಟ್ಟು ಬಾಹ್ಯಾಕಾಶ ವಿಜ್ಞಾನಿಗಳಿಗೆ ನೆರವಾಗುತ್ತಿದೆ.


ಇದನ್ನೂ ಓದಿ: History of Ganesh Chaturthi: ದೇಶದೆಲ್ಲೆಡೆ ಗಣೇಶ ಚತುರ್ಥಿ ಬೆಳೆದು ಬಂದ ಬಗೆ...


ಗ್ರೇಟ್‌ ಗುರೂ..!


'ಜೇಮ್ಸ್ ವೆಬ್' ಕಂಡುಹಿಡಿದ ಹೊಸ ಗ್ರಹಕ್ಕೆ 'WASP-39' ಹೆಸರು ಇಡಲಾಗಿದೆ. ಭೂಮಿಯಿಂದ‌ ಸುಮಾರು 700 ಜ್ಯೋತಿರ್ವರ್ಷ ಅಥವಾ ಬೆಳಕಿನ ವರ್ಷ ಅಂದ್ರೆ ಬೆಳಕಿನ ವೇಗದಲ್ಲಿ ಚಲಿಸಿದರೆ, ಹೊಸ ಗ್ರಹವನ್ನು ತಲುಪಲು ನಮಗೆ 700 ವರ್ಷ ಬೇಕು. ಇಷ್ಟು ದೂರದಲ್ಲಿ ಹೊಸ ಗ್ರಹ ಅಂದರೆ ಕಾರ್ಬನ್‌ ಡೈ ಆಕ್ಸೈಡ್‌ ಇರುವ ಗುರುಗ್ರಹದ ರೀತಿಯ ಗ್ರಹ ಪತ್ತೆಯಾಗಿದೆ. ಈಗ ಹೇಳಿ ಎಷ್ಟು ದೂರದಲ್ಲಿ ಇರಬಹುದು ಈ ಹೊಸ ಗ್ರಹ 'WASP-39'..? ಹೀಗೆ ಮಾನವರ ಕೈಗೆ ಎಟುಕಲಾರದಷ್ಟು ದೂರದಲ್ಲಿ ಇರುವ ಗ್ರಹದ ಫೋಟೋ ಕ್ಲಿಕ್ಕಿಸಿದೆ 'ಜೇಮ್ಸ್ ವೆಬ್' ಟೆಲಿಸ್ಕೋಪ್.‌ ಫೋಟೋ ಜೊತೆಗೆ 'WASP-39' ಗ್ರಹದ ಮಾಹಿತಿ ಕೂಡ ಸಂಗ್ರಹವಾಗಿದ್ದು ಬಾಹ್ಯಾಕಾಶ ವಿಜ್ಞಾನ ಲೋಕದಲ್ಲಿ ಸಂಚಲನ ಮೂಡಿದೆ.


ಗುರುವಿಗಿಂತ ದೊಡ್ಡದು..!


ನಮ್ಮ ಗುರುಗ್ರಹಕ್ಕಿಂತ ಸುಮಾರು 1.3 ಪಟ್ಟು ದೊಡ್ಡದಾಗಿರುವ 'WASP-39' ಗ್ರಹ, ಬಿಸಿಯಾದ ವಾತಾವರಣ ಹಾಗೂ ವಿವಿಧ ರೀತಿ ಅನಿಲವನ್ನು ಅಥವಾ ಗ್ಯಾಸ್‌ನ ಒಡಲಾಳದಲ್ಲಿ ಇಟ್ಟುಕೊಂಡಿದೆ. ಗುರುಗ್ರಹದ ರೀತಿ ಇನ್ನೊಂದು ನಕ್ಷತ್ರದ ಸುತ್ತಲೂ ಸುತ್ತುತ್ತಿದೆ WASP-39. ಆದರೆ ಗುರುಗ್ರಹಕ್ಕಿಂತಲೂ ಹೆಚ್ಚು ವೇಗ 'WASP-39' ಗ್ರಹಕ್ಕಿದ್ದು ವಿಜ್ಞಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ಸೌರಮಂಡಲ ಅಂದ್ರೆ ನಮ್ಮ ಸೂರ್ಯನ ಕುಟುಂಬವನ್ನು ಬಿಟ್ಟು‌  ವಿಶ್ವದಲ್ಲಿ ಈವರೆಗೆ ಕಾರ್ಬನ್‌ ಡೈ ಆಕ್ಸೈಡ್‌ ಅನಿಲ ಇರುವ ಗ್ರಹ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಸಾಧನೆ ಮಾಡಿ ತೋರಿಸಿದೆ 'ಜೇಮ್ಸ್ ವೆಬ್' ಟೆಲಿಸ್ಕೋಪ್.‌


'ಜೇಮ್ಸ್ ವೆಬ್' ಸಾಧನೆಗೆ ಈಗಾಗಲೇ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿಂದೆ ಹಲವು ಸಾಧನೆ ಮಾಡಿದ್ದ 'ಜೇಮ್ಸ್ ವೆಬ್' ಬಾಹ್ಯಾಕಾಶ ದೂರದರ್ಶಕ ಮತ್ತೊಂದು ಸಾಧನೆ ಮಾಡಿದೆ. ಈ ಬಗ್ಗೆ ಜಾನ್ಸ್ ಹಾಪ್ಕಿನ್ಸ್ ವಿವಿ ಸಂಶೋಧಕ ಜಾಫರ್ ರುಸ್ತಮ್ಕುಲೋವ್ ಸಂತಸ ವ್ಯಕ್ತಪಡಿಸಿದ್ದು, 'ಎಂದೂ ಮರೆಯಲು ಆಗದ ಸಾಧನೆ ಇದು, ಅನ್ಯಗ್ರಹ ಸಂಶೋಧನೆಯಲ್ಲಿ ನಮ್ಮ ಮಿತಿಯನ್ನು ಈ ಮೂಲಕ ದಾಟಿ ಹೊಸ ಸಾಧನೆ ಮಾಡಿದ್ದೇವೆ' ಎಂದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.