ಸಿ295 - ಭಾರತದ ಪ್ರಥಮ ಖಾಸಗಿ ವಲಯದ ವೈಮಾನಿಕ ಮೇಕ್ ಇನ್ ಇಂಡಿಯಾ ಯೋಜನೆ
ಸೆಪ್ಟೆಂಬರ್ 2021ರಲ್ಲಿ, ಭಾರತ ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಸಂಸ್ಥೆಯೊಡನೆ 21,935 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತದ ಬಳಿ ಇರುವ ಹಳೆಯದಾದ, 1960ರ ದಶಕದಲ್ಲಿ ಸೇವೆಗೆ ಲಭ್ಯವಾಗಿದ್ದ ಆವ್ರೋ-748 ವಿಮಾನಗಳ ಬದಲಿಗೆ 56 ಸಿ295 ವಿಮಾನಗಳ ನಿರ್ಮಾಣಕ್ಕೆ ನಿರ್ಧರಿಸಿತು.
ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ವಲಯ ಇಂದು ಭಾರತದಲ್ಲಿದೆ. ವಾಯು ಸಂಚಾರದಲ್ಲಿ ಭಾರತ ಇಂದು ಜಾಗತಿಕವಾಗಿ ಮೊದಲ ಮೂರು ರಾಷ್ಟ್ರಗಳ ಸಾಲಿನಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2022ರ ಅಕ್ಟೋಬರ್ 30ರಂದು ಸಿ295ಎಂಡಬ್ಲ್ಯು ವಿಮಾನ ಉತ್ಪಾದನಾ ಘಟಕದ ಸ್ಥಾಪನೆಗೆ ಗುಜರಾತಿನ ವಡೋದರಾದಲ್ಲಿ ಅಡಿಗಲ್ಲು ಹಾಕಿದರು. ಇಲ್ಲಿ ಟಾಟಾ ಏರ್‌ಬಸ್ ಸಂಸ್ಥೆಗಳು ಒಂದಾಗಿ ಭಾರತೀಯ ವಾಯುಪಡೆಗೆ (ಐಎಎಫ್) ಸಾಗಾಣಿಕಾ ವಿಮಾನಗಳನ್ನು ಉತ್ಪಾದಿಸಲಿದೆ.
ಇದೇ ಮೊದಲ ಬಾರಿಗೆ ಒಂದು ಖಾಸಗಿ ಸಂಸ್ಥೆಯ ವತಿಯಿಂದ ಭಾರತದಲ್ಲಿ ವಾಯುಪಡೆಗಾಗಿ ಮಿಲಿಟರಿ ವಿಮಾನವನ್ನು ನಿರ್ಮಾಣಗೊಳಿಸುತ್ತಿದೆ. ಸಿ295 ಮೂಲತಃ ಕನ್ಸ್ಟ್ರಸ್ಸಿಯೊನೇಸ್ ಏರೋನಾಟಿಕಾಸ್ ಎಸ್‌ಎ ಎಂಬ ಸ್ಪ್ಯಾನಿಷ್ ಕಂಪನಿ ತಯಾರಿಸುತ್ತಿದ್ದ ವಿಮಾನವಾಗಿತ್ತು. ಆ ಕಂಪನಿ ಈಗ ಏರ್‌ಬಸ್ ಸಂಸ್ಥೆಯ ಭಾಗವಾಗಿದ್ದು, ವಿಮಾನದ ಉತ್ಪಾದನೆ ಸ್ಪೇನ್‌ನಲ್ಲಿರುವ ಏರ್‌ಬಸ್ ಉತ್ಪಾದನಾ ಘಟಕದಲ್ಲಿ ನಡೆಯುತ್ತಿದೆ.
ಸೆಪ್ಟೆಂಬರ್ 2021ರಲ್ಲಿ, ಭಾರತ ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಸಂಸ್ಥೆಯೊಡನೆ 21,935 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತದ ಬಳಿ ಇರುವ ಹಳೆಯದಾದ, 1960ರ ದಶಕದಲ್ಲಿ ಸೇವೆಗೆ ಲಭ್ಯವಾಗಿದ್ದ ಆವ್ರೋ-748 ವಿಮಾನಗಳ ಬದಲಿಗೆ 56 ಸಿ295 ವಿಮಾನಗಳ ನಿರ್ಮಾಣಕ್ಕೆ ನಿರ್ಧರಿಸಿತು.
ಆವ್ರೋ ಎಚ್ಎಸ್748 ಬ್ರಿಟಿಷ್ ಸಂಸ್ಥೆಯಾದ ಆವ್ರೋದ ಉತ್ಪನ್ನವಾಗಿದ್ದು, ಲೈಸೆನ್ಸ್ ಆಧಾರದಲ್ಲಿ ಎಚ್ಎಎಲ್ ಉತ್ಪಾದಿಸುತ್ತಿತ್ತು. ಈ ವಿಮಾನಗಳು ಈಗ ನಿವೃತ್ತಿಯಾಗುತ್ತಿವೆ. ಎಚ್ಎಎಲ್ ಆವ್ರೋ ವಿಮಾನಗಳ ತಂಡವನ್ನು ಆಧುನೀಕರಣಗೊಳಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆ ವಿಮಾನಗಳು ಆಧುನಿಕ ಮಿಲಿಟರಿ ಸಾಗಾಟ ವಿಮಾನಗಳಲ್ಲಿರುವ ವೈಶಿಷ್ಟ್ಯಗಳನ್ನು ಹೊಂದಿರದ ಕಾರಣ ವಾಯುಪಡೆ ಆ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಆವ್ರೋ ವಿಮಾನಗಳಲ್ಲಿ ಹಿಂದಿನ ರಾಂಪ್ ಡೋರ್ ಇಲ್ಲದಿರುವ ಕಾರಣ ಅದನ್ನು ಮಿಲಿಟರಿ ಉತ್ಪನ್ನಗಳ ಸಾಗಾಟಕ್ಕೆ ಬಳಸಲು ಸಾಧ್ಯವಿಲ್ಲ.
ಸಿ-295 ಮುಂದಿನ ದಿನಗಳಲ್ಲಿ ಎಎನ್-32 ವಿಮಾನಗಳ ಜಾಗಕ್ಕೂ ಸೇರ್ಪಡೆಯಾಗಲಿದೆ. ಎಎನ್-32 ವಿಮಾನಗಳು ಈ ಹಿಂದೆ ಸಾಕಷ್ಟು ಅಪಘಾತಗಳಿಗೆ ಒಳಗಾಗಿದ್ದವು. ಈ ವಿಮಾನಗಳು ಈಶಾನ್ಯ ಭಾರತದ ಕಷ್ಟಕರ ಪ್ರದೇಶಗಳಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿಲ್ಲ. ಚೀನಾದ ಗಡಿ ಪ್ರದೇಶದಲ್ಲಿ ಸಿ-295 ಪ್ರಮುಖ ಪಾತ್ರ ನಿರ್ವಹಿಸಲಿದೆ.
ಈ ಒಪ್ಪಂದದಡಿ, ಏರ್‌ಬಸ್ ಮೊದಲ 16 ವಿಮಾನಗಳನ್ನು 'ಫ್ಲೈ ಅವೇ' ಸ್ಥಿತಿಯಲ್ಲಿ ನಾಲ್ಕು ವರ್ಷಗಳಲ್ಲಿ ತನ್ನ ಸ್ಪೇನಿನ ಸೆವಿಲ್ಲೆಯ ಘಟಕದಿಂದ ಪೂರೈಸಲಿದೆ. ಮುಂದಿನ 40 ವಿಮಾನಗಳನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಲಿಮಿಟೆಡ್ (ಟಿಎಎಸ್ಎಲ್) ಭಾರತದಲ್ಲಿ ನಿರ್ಮಿಸಲಿದೆ.
ಈ 16 ಹಾರಾಟ ಸನ್ನದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೆಪ್ಟೆಂಬರ್ 2023 ಮತ್ತು ಆಗಸ್ಟ್ 2025ರ ಮಧ್ಯ ಒದಗಿಸಲಿವೆ. ಮೊದಲ ಮೇಡ್ ಇನ್ ಇಂಡಿಯಾ ವಿಮಾನ ಭಾರತೀಯ ನಿರ್ಮಾಣ ಘಟಕದಿಂದ ಸೆಪ್ಟೆಂಬರ್ 2026ರಲ್ಲಿ ಹೊರಬರಲಿದೆ. ಮುಂದಿನ 39 ವಿಮಾನಗಳು 2031 ಆಗಸ್ಟ್ ಒಳಗೆ ನಿರ್ಮಾಣಗೊಳ್ಳಲಿವೆ.
56 ವಿಮಾನಗಳನ್ನು ಭಾರತೀಯ ವಾಯುಪಡೆಗೆ ಒದಗಿಸಿದ ಬಳಿಕ, ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಸಂಸ್ಥೆ ತಾನು ಭಾರತದಲ್ಲಿ ನಿರ್ಮಿಸುವ ವಿಮಾನಗಳನ್ನು ನಾಗರಿಕ ವಾಯುಯಾನ ಸಂಸ್ಥೆಗಳಿಗೆ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ. ಭಾರತ ಸರ್ಕಾರ ಅನುಮತಿ ನೀಡಿದ ದೇಶಗಳಿಗೆ ಅವುಗಳನ್ನು ರಫ್ತು ಮಾಡಬಹುದು.
ಸಿ295 ವಿಮಾನದ ತಾಂತ್ರಿಕ ವೈಶಿಷ್ಯಗಳೇನು?
ಸಿ295 ಒಂದು ಸಾಗಾಣಿಕಾ ವಿಮಾನವಾಗಿದ್ದು, 5-10 ಟನ್ ತೂಕ ಹೊತ್ತು ಸಾಗಬಲ್ಲದು. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 480 ಕಿಲೋಮೀಟರ್ ಆಗಿದೆ. ಇದರಲ್ಲಿ ಹಿಂಭಾಗದ ರಾಂಪ್ ಡೋರ್ ಇದ್ದು, ಅದು ಕ್ಷಿಪ್ರ ಕಾರ್ಯಾಚರಣೆ ಮತ್ತು ಪಡೆಗಳು ಮತ್ತು ಉಪಕರಣಗಳ ಪ್ಯಾರಾ ಡ್ರಾಪಿಂಗ್‌ಗೆ ಸಹಾಯಕವಾಗಿದೆ. ಸೆಮಿ ಪ್ರಿಪೇರ್ಡ್ ಮೇಲ್ಮೈಗಳಿಂದ ಕಡಿಮೆ ದೂರದಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್ ಈ ವಿಮಾನದ ಇನ್ನೊಂದು ವಿಶೇಷತೆಯಾಗಿದೆ.
ಏರ್‌ಬಸ್ ಸಂಸ್ಥೆ ಒದಗಿಸಿರುವ ತಾಂತ್ರಿಕ ವಿಶೇಷಣಗಳ ಪ್ರಕಾರ, ಈ ವಿಮಾನದ ಕ್ಯಾಬಿನ್ 12.7 ಮೀಟರ್ ಅಥವಾ 41 ಅಡಿ ಮತ್ತು 8 ಇಂಚುಗಳಾಗಿವೆ. ಏರ್‌ಬಸ್ ಸಂಸ್ಥೆ 71 ಆಸನಗಳನ್ನು ಹೊಂದಿರುವ ಈ ವಿಮಾನ ತನ್ನ ವರ್ಗದಲ್ಲಿ ಅಡೆತಡೆಯಿಲ್ಲದ, ಅತಿ ಉದ್ದದ ಕ್ಯಾಬಿನ್ ಹೊಂದಿದೆ. ಏರ್‌ಬಸ್ ಈ ವಿಮಾನ ತನ್ನ ಎಲ್ಲ ಪ್ರತಿಸ್ಪರ್ಧಿ ವಿಮಾನಗಳಿಂದ ಹೆಚ್ಚು ವಸ್ತುಗಳನ್ನು ಕೊಂಡೊಯ್ದು, ರಿಯರ್ ರಾಂಪ್ ಮೂಲಕ ಕೆಳಗಿಳಿಸಬಲ್ಲದು.
ಎಲ್ಲ 56 ವಿಮಾನಗಳಲ್ಲೂ ದೇಶೀಯ ನಿರ್ಮಾಣದ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಇರಲಿದೆ. ಇದನ್ನು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನಿರ್ಮಿಸಲಿದೆ.
ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಈ ವಿಮಾನದಲ್ಲಿರುವ ದೇಶೀಯ ನಿರ್ಮಾಣದ ಉಪಕರಣಗಳು ಭಾರತದಲ್ಲೇ ಅತ್ಯಧಿಕವಾಗಿದ್ದು, ಏರ್‌ಬಸ್ ಈ ವಿಮಾನ ನಿರ್ಮಾಣಕ್ಕೆ ಸ್ಪೇನ್‌ನಲ್ಲಿ ನಿರ್ಮಿಸುವ 96% ವಸ್ತುಗಳು ವಡೋದರಾದಲ್ಲೇ ನಿರ್ಮಾಣಗೊಳ್ಳಲಿವೆ.
ಸಿ295 ಜಗತ್ತಿನಲ್ಲಿ ಯಾವ ಭೂಪ್ರದೇಶದಲ್ಲಿ ಕಾರ್ಯಾಚರಿಸಿದೆ?
ಏರ್‌ಬಸ್ ಸಂಸ್ಥೆಯ ಪ್ರಕಾರ, ಸಿ295 ವಿಮಾನ ಬ್ರೆಜಿಲ್‌ನ ಕಾಡುಗಳಲ್ಲಿ ಮತ್ತು ದಕ್ಷಿಣ ಅಮೆರಿಕಾದ ಕೊಲಂಬಿಯನ್ ಪರ್ವತಗಳಲ್ಲಿ, ಅಲ್ಜೀರಿಯಾ ಮತ್ತು ಮಧ್ಯಪ್ರಾಚ್ಯದ ಜೋರ್ಡಾನಿನ ಮರುಭೂಮಿಯಲ್ಲಿ, ಯುರೋಪಿನ ಪೋಲ್ಯಾಂಡ್ ಮತ್ತು ಫಿನ್‌ಲ್ಯಾಂಡ್‌ಗಳ ತಣ್ಣಗಿನ ವಾತಾವರಣದಲ್ಲಿ ಕಾರ್ಯ ನಿರ್ವಹಿಸಿದೆ. ಈ ವಿಮಾನ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಚಾಡ್, ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲೂ ಕಾರ್ಯ ನಿರ್ವಹಿಸಿವೆ.
ಸಿ295 ಯಾವ ಕಾರ್ಯಗಳನ್ನು ನಿರ್ವಹಿಸುತ್ತದೆ?
ಒಂದು ಕಾರ್ಯತಂತ್ರದ ಸಾಗಾಣಿಕಾ ವಿಮಾನವಾಗಿ, ಸಿ295 ಸೈನಿಕರು ಮತ್ತು ಮಿಲಿಟರಿ ಉಪಕರಣಗಳನ್ನು ಪ್ರಮುಖ ವಾಯುನೆಲೆಗಳಿಂದ ಕಾರ್ಯಾಚರಿಸುವ ವಾಯುನೆಲೆಗಳಿಗೆ ಕೊಂಡೊಯ್ಯುತ್ತದೆ. ಇದು ಶಾರ್ಟ್ ಟೇಕಾಫ್ ಆ್ಯಂಡ್ ಲ್ಯಾಂಡಿಂಗ್ (ಎಸ್‌ಟಿಒಎಲ್) ಸಾಮರ್ಥ್ಯ ಹೊಂದಿದ್ದು, ಭಾರತದ ಸಣ್ಣದಾದ, ಪೂರ್ಣವಾಗಿ ಸಿದ್ಧಗೊಳ್ಳದ ಏರ್ ಸ್ಟ್ರಿಪ್‌ಗಳಲ್ಲಿ ಕಾರ್ಯಾಚರಿಸಬಲ್ಲದು. ಇದು ಕೇವಲ 2,200 ಅಡಿ ಉದ್ದದ ಸಣ್ಣ ಏರ್ ಸ್ಟ್ರಿಪ್‌ಗಳಲ್ಲೂ ಕಾರ್ಯ ನಿರ್ವಹಿಸಬಲ್ಲದು. ಕಾರ್ಯಾಚರಣೆಗಾಗಿ ಕೆಳ ಮಟ್ಟದಲ್ಲಿ ಹಾರಾಟ ನಡೆಸಬಲ್ಲದು. ಇದಕ್ಕಾಗಿ 110 ನಾಟ್‌ಗಳ ಕನಿಷ್ಠ ವೇಗದಲ್ಲೂ ಹಾರಾಟ ನಡೆಸಬಲ್ಲದು ಎಂದು ಏರ್‌ಬಸ್ ಸಂಸ್ಥೆ ವಿವರಿಸಿದೆ.
ಈ ವಿಮಾನವನ್ನು ಗಾಯಾಳುಗಳ ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆಗೂ ಬಳಸಬಹುದು. ಇದು ವಿಶೇಷ ಕಾರ್ಯಾಚರಣೆಗಳು, ವಿಪತ್ತು ರಕ್ಷಣೆ ಮತ್ತು ಸಮುದ್ರದ ಗಸ್ತು ಕಾರ್ಯಾಚರಣೆಗಳನ್ನೂ ನಡೆಸಬಲ್ಲದು.
ಇದು ಭಾರತಕ್ಕೆ ಎಷ್ಟು ಮುಖ್ಯ?
ಭಾರತ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ಗ್ಲೋಬ್' ಎಂಬ ಮಂತ್ರವನ್ನು ಅನುಸರಿಸುತ್ತಾ, ತನ್ನ ಸಾಮರ್ಥ್ಯವನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ.
ಟಾಟಾ ಏರ್‌ಬಸ್ ಸಂಸ್ಥೆಗಳು ಜಂಟಿಯಾಗಿ ಹೇಳಿಕೆ ನೀಡಿ, ಸಿ295 ಉತ್ಪಾದನೆ ಭಾರತದ ಪ್ರಥಮ ಖಾಸಗಿ ವಲಯದ ವೈಮಾನಿಕ ಮೇಕ್ ಇನ್ ಇಂಡಿಯಾ ಯೋಜನೆಯಾಗಿದ್ದು, ಇದಕ್ಕಾಗಿ ಸಂಪೂರ್ಣ ಹೊಸದಾದ ವ್ಯವಸ್ಥೆಯ ನಿರ್ಮಾಣವನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಿಸುವ ತನಕ, ಪರೀಕ್ಷೆಯಿಂದ ಅರ್ಹತೆ ನಿರ್ಧರಿಸುವ ತನಕ, ವಿಮಾನದ ಪೂರೈಕೆಯಿಂದ ನಿರ್ವಹಣೆಯ ತನಕ, ವಿಮಾನದ ಸಂಪೂರ್ಣ ಜೀವಿತಾವಧಿಯನ್ನು ಒಳಗೊಂಡಿದೆ ಎಂದು ತಿಳಿಸಿದೆ.
ರಕ್ಷಣಾ ಸಚಿವಾಲಯ ಇದರ ಕುರಿತು ಮಾಹಿತಿ ನೀಡಿ, 13,400 ಬಿಡಿಭಾಗಗಳು, 4,600 ಸಬ್ ಅಸೆಂಬ್ಲಿಗಳು ಮತ್ತು ಎಲ್ಲ ಏಳು ಪ್ರಮುಖ ಕಾಂಪೊನೆಂಟ್ ಅಸೆಂಬ್ಲಿಗಳು ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಎಂದಿದೆ.
ಇಂಜಿನ್, ಲ್ಯಾಂಡಿಂಗ್ ಗೇರ್, ಏವಿಯಾನಿಕ್ಸ್ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಪೂರೈಸಲಿದ್ದು, ಅವುಗಳನ್ನು ಟಾಟಾ ಕನ್ಸೋರ್ಷಿಯಂ ವಿಮಾನದಲ್ಲಿ ಅಳವಡಿಸಲಿದೆ.
ಈ ಯೋಜನೆ ನೇರವಾಗಿ 600 ಅಪಾರ ಕೌಶಲ ಹೊಂದಿರುವ ಉದ್ಯೋಗಗಳನ್ನು ಒದಗಿಸುವ ನಿರೀಕ್ಷೆಯಿದೆ. 3,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು, ಹಾಗೂ ಇನ್ನೂ 3,000 ಮಧ್ಯಮ ಕೌಶಲ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಇದು ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿ 42.5 ಲಕ್ಷ ಮಾನವ ಗಂಟೆಗಳ ಕೆಲಸಗಳನ್ನು ಒದಗಿಸಲಿದೆ. ಈ ಯೋಜನೆಗಾಗಿ ಬಹುತೇಕ 240 ಇಂಜಿನಿಯರ್‌ಗಳಿಗೆ ಏರ್‌ಬಸ್ ಸಂಸ್ಥೆಯ ಸ್ಪೇನಿನ ಘಟಕದಲ್ಲಿ ತರಬೇತಿ ನೀಡಲಾಗುತ್ತದೆ.
ಡಿಸೆಂಬರ್ 2022ರ ವರದಿಯ ಪ್ರಕಾರ, ಭಾರತ ಸರ್ಕಾರ 21,935 ಕೋಟಿ ರೂಪಾಯಿಗಳ ಒಪ್ಪಂದದಡಿ ಇನ್ನೂ 15 ಸಿ295 ವಿಮಾನಗಳನ್ನು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ಗಾಗಿ ಖರೀದಿಸಲು ಉದ್ದೇಶಿಸಿದೆ. ಇವು ಈ ಮೊದಲೇ ಭಾರತಕ್ಕೆ ಪೂರೈಸಲು ಒಪ್ಪಿರುವ 56 ಟ್ವಿನ್-ಟರ್ಬೋಪ್ರಾಪ್ ಸಿ-295 ವಿಮಾನಗಳಲ್ಲದೆ ಹೆಚ್ಚುವರಿ ವಿಮಾನಗಳಾಗಿವೆ ಎಂದು ತಿಳಿದು ಬಂದಿದೆ.
15 ಸಿ295 ವಿಮಾನಗಳಲ್ಲಿ 9 ವಿಮಾನಗಳನ್ನು ನೌಕಾಪಡೆ ಮತ್ತು 6 ವಿಮಾನಗಳನ್ನು ಕೋಸ್ಟ್ ಗಾರ್ಡ್ ಬಳಸಲಿವೆ. ವರದಿಗಳ ಪ್ರಕಾರ, ಇವುಗಳಲ್ಲಿ ಮಲ್ಟಿ ಮೋಡ್ ರೇಡಾರ್‌ಗಳು, ಇಲೆಕ್ಟ್ರೋ ಆಪ್ಟಿಕ್ ಕ್ಯಾಮರಾಗಳು ಮತ್ತು ಸೋನೋಬುವೋಯ್‌ಗಳನ್ನು ಅಳವಡಿಸಲಾಗುತ್ತದೆ.
ವರದಿಗಳ ಪ್ರಕಾರ, ಈ 15 ಹೆಚ್ಚುವರಿ ವಿಮಾನಗಳು ಅಂದಾಜು 18,000 ಕೋಟಿ ರೂಪಾಯಿ ಬೆಲೆ ಬಾಳಲಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಶೀಘ್ರವಾಗಿ ಈ ಯೋಜನೆಗೆ ಅಕ್ಸೆಪ್ಟೆನ್ಸ್ ಆಫ್ ನೆಸೆಸರಿ (ಎಒಎನ್) ಪಡೆದುಕೊಳ್ಳಲಿದೆ.
"15 ಎಂಆರ್‌ಎಂಆರ್ ವಿಮಾನಗಳು 11 ಗಂಟೆಗಳ ತನಕ ಹಾರಾಟ ಸಾಮರ್ಥ್ಯ ಹೊಂದಿದ್ದು, ಇವುಗಳನ್ನು ಮುಂದಿನ ದಿನಗಳಲ್ಲಿ ಡಾರ್ನಿಯರ್-228 ವಿಮಾನಗಳೊಡನೆ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಮಧ್ಯಮ ವ್ಯಾಪ್ತಿಯ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ" ಎಂದು ಮೂಲಗಳು ಹೇಳಿವೆ.
ಈ ವಿಮಾನಗಳ ಕಾರ್ಯತಂತ್ರದ ಆಸಕ್ತಿಯ ಪ್ರದೇಶಗಳು ಪರ್ಷಿಯನ್ ಕೊಲ್ಲಿಯಿಂದ ಮಲಾಕಾ ಜಲಸಂಧಿಯ ತನಕದ ಕರಾವಳಿ ತೀರವಾಗಿದೆ. ಇದು 5,422 ಕಿಲೋಮೀಟರ್ ದೀರ್ಘವಾಗಿದೆ. ಪ್ರಸ್ತುತ ಭಾರತೀಯ ನೌಕಾಪಡೆ ತನ್ನ ದೀರ್ಘ ವ್ಯಾಪ್ತಿಯ ವಿಚಕ್ಷಣೆಗಾಗಿ, 12 ಪಿ-ಬಿಐ ವಿಮಾನವನ್ನು ಬಳಸಿಕೊಳ್ಳುತ್ತಿದೆ.
ಲೇಖಕರು- ಗಿರೀಶ್ ಲಿಂಗಣ್ಣ