ಇತ್ತೀಚಿನ ವರದಿಗಳ ಪ್ರಕಾರ, ಚೀನಾ ತನ್ನ ಎದುರಾಳಿಗಳ ಉಪಗ್ರಹಗಳ ನಿಯಂತ್ರಣ ಪಡೆದುಕೊಳ್ಳುವಂತಹ ಹ್ಯಾಕಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುತ್ತಿದೆ. ಚೀನಾ 'ಯುದ್ಧರಂಗ' ಎಂದೇ ಪರಿಗಣಿಸುವ ಈ ಕ್ಷೇತ್ರದಲ್ಲಿ ಅದು ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದೇನೂ ಆಶ್ಚರ್ಯದ ವಿಷಯವಲ್ಲ. ಚೀನಾದ ಸೈಬರ್ ಆಯುಧಗಳು ಯುದ್ಧದ ಸಂದರ್ಭದಲ್ಲಿ ಪಾಶ್ಚಾತ್ಯ ಉಪಗ್ರಹಗಳನ್ನು ನಿರುಪಯುಕ್ತಗೊಳಿಸಿ, ಯುದ್ಧ ಸಂದರ್ಭದಲ್ಲಿ ಅವುಗಳು ಸಂವಹನ, ವಿಚಕ್ಷಣೆ ನಡೆಸದಂತೆ, ಒಂದಕ್ಕೊಂದು ಸಂಪರ್ಕಿಸುವ ಅವುಗಳ ಸಾಮರ್ಥ್ಯವನ್ನು ಕುಂಠಿತಗೊಳಿಸಿ, ಆಯುಧ ವ್ಯವಸ್ಥೆಗಳಿಗೆ ಆದೇಶ ಕೊಡುವುದು ಮತ್ತು ಭೂಮಿಗೆ ಚಿತ್ರಣ ಮತ್ತು ಇಲೆಕ್ಟ್ರಾನಿಕ್ ಮಾಹಿತಿಗಳನ್ನು ಕೊಡುವುದು ಸಾಧ್ಯವಾಗದಂತೆ ಮಾಡುತ್ತವೆ.


COMMERCIAL BREAK
SCROLL TO CONTINUE READING

ಈ ವರದಿಗಳು ಅಮೆರಿಕಾದ ರಹಸ್ಯ ದಾಖಲೆಗಳನ್ನು ಆಧರಿಸಿದ್ದು, ಕಳೆದ ಒಂದು ದಶಕದ ಅವಧಿಯಲ್ಲಿ ಚೀನಾ ಉಪಗ್ರಹ ಸಂವಹನವೂ ಸೇರಿದಂತೆ ಬಾಹ್ಯಾಕಾಶ ವಲಯದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯ ವೃದ್ಧಿಸಲು ಅಪಾರವಾಗಿ ಪ್ರಯತ್ನ ನಡೆಸಿದೆ ಎಂದು ತೋರಿಸುತ್ತದೆ. ಅಮೆರಿಕಾ ಮತ್ತು ಚೀನಾಗಳ ಮಧ್ಯೆ ಸದಾ ಸಮಸ್ಯಾತ್ಮಕ ವ್ಯಾಪಾರ ಸಂಬಂಧ ಮತ್ತು ಜಾಗತಿಕ ರಾಜಕಾರಣದ ಸಂಬಂಧ ದೀರ್ಘಕಾಲದಿಂದಲೂ ನಡೆದು ಬಂದಿದ್ದು, ಚೀನಾ ಶತ್ರು ರಾಷ್ಟ್ರಗಳ ಉಪಗ್ರಹಗಳನ್ನೂ ಹ್ಯಾಕ್ ಮಾಡುವ ಸಾಮರ್ಥ್ಯ ಪಡೆದಿದೆ ಎನ್ನುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಲಿದೆ.


ಅದರೊಡನೆ, ಚೀನಾ ತೈವಾನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂಬ ಭಯದ ವಾತಾವರಣವೂ ನಿರ್ಮಾಣವಾಗಿದ್ದು, ತೈವಾನ್ ಅನ್ನು ಚೀನಾ ತನ್ನ ಪ್ರದೇಶ ಎಂದು ಪರಿಗಣಿಸುತ್ತದೆ. ಅಮೆರಿಕಾ ಸತತವಾಗಿ ತೈವಾನ್‌ಗೆ ಬೆಂಬಲವಾಗಿ ನಿಂತಿದ್ದು, ಆ ಪ್ರದೇಶದಲ್ಲಿ ಮಿಲಿಟರಿ ಅಭ್ಯಾಸವನ್ನೂ ನಡೆಸುತ್ತದೆ. ಪ್ರಸ್ತುತ ಚೀನಾ ಮತ್ತು ಅಮೆರಿಕಾಗಳ ನಡುವಿನ ಪ್ರಕ್ಷುಬ್ಧತೆ ಈ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.


ಇದನ್ನೂ ಓದಿ- ವಾಟ್ಸಾಪ್ ಮೂಲಕವೂ ಕರೆಂಟ್ ಬಿಲ್ ಪಾವತಿಸಬಹುದು!


ಅಮೆರಿಕಾದ ಸ್ಪೇಸ್ ಫೋರ್ಸ್ ಮುಖ್ಯಸ್ಥರಾದ ಜನರಲ್ ಬ್ರಾಡ್ಲಿ ಚಾನ್ಸ್ ಸಾಲ್ಟ್ಸ್‌ಮ್ಯಾನ್ ಅವರು ಇತ್ತೀಚೆಗೆ ಅಮೆರಿಕಾ ಚೀನಾ ಮತ್ತು ರಷ್ಯಾಗಳಿಂದ ಭೂಮ್ಯಾತೀತವಾದ ಅಪಾಯಗಳನ್ನು ಎದುರಿಸುತ್ತಿದ್ದು, ಇದು ಕೇವಲ ಮಧ್ಯಪ್ರವೇಶಕ್ಕಿಂತಲೂ ಹೆಚ್ಚಾದದ್ದು ಎಂದು ಎಚ್ಚರಿಕೆ ನೀಡಿದ್ದರು. ಅವರು ರಷ್ಯಾ 2021ರ ಕೊನೆಯಲ್ಲಿ ಆ್ಯಂಟಿ ಸ್ಯಾಟಲೈಟ್ (ಉಪಗ್ರಹ ನಿರೋಧಿ) ಕ್ಷಿಪಣಿಗಳನ್ನು ಪರೀಕ್ಷಿಸಿದ್ದು ಮತ್ತು ಚೀನಾ ಹ್ಯಾಕಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿರುವುದನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಮಿಲಿಟರಿ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದೊಡ್ಡುವ ಕಾರಣದಿಂದ ಈ ಬೆಳವಣಿಗೆ ಅಪಾಯಕಾರಿಯಾಗಿದೆ.


ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಈ ವಾರ ರಷ್ಯಾ ನೂತನ ತಂತ್ರಜ್ಞಾನವೊಂದನ್ನು ಪ್ರಯೋಗಿಸುತ್ತಿದ್ದು, ಆ ಮೂಲಕ ಉಕ್ರೇನ್‌ಗೆ ಯುದ್ಧದ ಆರಂಭದ ವೇಳೆ ಬಿಲಿಯನೇರ್ ಇಲಾನ್ ಮಸ್ಕ್ ನೀಡಿದ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದೆ. ಆಧುನಿಕ ಯುದ್ಧದಲ್ಲಿ ಮೇಲುಗೈ ಸಾಧಿಸಲು ರಷ್ಯಾ ಈಗ ಚೀನಾ ಕೈಗೊಳ್ಳುತ್ತಿರುವ ಪ್ರಯತ್ನವನ್ನೇ ನಡೆಸುತ್ತಿದೆ ಎನ್ನಲಾಗಿದೆ.


ಬ್ರಿಟನ್ನಿನ ಸೈಬರ್ ವಿಭಾಗದ ಮುಖ್ಯಸ್ಥ ಲಿಂಡ್ಸೀ ಕ್ಯಾಮರಾನ್ ಅವರು ಚೀನಾ ಪ್ರಸ್ತುತ 'ಜಾಗತಿಕ ತಾಂತ್ರಿಕ ಪ್ರಾಬಲ್ಯ' ಸಾಧಿಸಲು ಪ್ರಯತ್ನ ನಡೆಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. ಬ್ರಿಟನ್ನಿನ ಬೇಹುಗಾರಿಕಾ ಸಂಸ್ಥೆ ಜಿಸಿಎಚ್‌ಕ್ಯುನ ಅಂಗಸಂಸ್ಥೆಯಾದ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ (ಎನ್‌ಸಿಎಸ್‌ಸಿ) ನಿರ್ದೇಶಕರಾಗಿರುವ ಕ್ಯಾಮರಾನ್ ಅವರು "ಚೀನಾ ಕೇವಲ ಪಾಶ್ಚಾತ್ಯ ಜಗತ್ತಿಗೆ ಸರಿಸಮವಾಗಿರಲು ಪ್ರಯತ್ನ ನಡೆಸುತ್ತಿಲ್ಲ. ಬದಲಿಗೆ ಜಾಗತಿಕ ತಂತ್ರಜ್ಞಾನದಲ್ಲಿ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ" ಎಂದಿದ್ದಾರೆ. ಅವರು, ಚೀನಾ ತನ್ನ ಸೈಬರ್ ಸಾಮರ್ಥ್ಯವನ್ನು ಬಳಸಿಕೊಂಡು, ಬೌದ್ಧಿಕ ಆಸ್ತಿ ಸಂಗ್ರಹಿಸಿ, ಆ ಮೂಲಕ ತನ್ನ ಜಾಗತಿಕ ರಾಜಕಾರಣದ ಗುರಿಗಳನ್ನು ಸಾಧಿಸಲು ಪ್ರಯತ್ನ ನಡೆಸುತ್ತಿದೆ. ಆ ಮೂಲಕ ಜಾಗತಿಕ ಬೇಹುಗಾರಿಕೆ ನಡೆಸುವ ಉದ್ದೇಶ ಹೊಂದಿದೆ.


ಇದನ್ನೂ ಓದಿ- Westinghouse 55 inch 4K Smart TV : ಅಗ್ಗದ ಬೆಲೆಗೆ ಮಾರುಕಟ್ಟೆಗೆ ಬಂದಿದೆ 55 ಇಂಚಿನ ಸ್ಮಾರ್ಟ್ ಟಿವಿ


ಶತ್ರು ರಾಷ್ಟ್ರಗಳ ಉಪಗ್ರಹಗಳನ್ನು ಹ್ಯಾಕ್ ಮಾಡುವ ಮೂಲಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎನ್ನುವುದು ಚೀನಾದ ಮಿಲಿಟರಿ ವಿಸ್ತರಣೆ ಮತ್ತು ಸೈಬರ್ ಸಾಮರ್ಥ್ಯದ ಕುರಿತು ಜಗತ್ತಿಗೆ ಕಳವಳ ಮೂಡಿಸಿದೆ. ಅಮೆರಿಕಾ, ಬ್ರಿಟನ್ ಹಾಗೂ ಇತರ ರಾಷ್ಟ್ರಗಳು ಚೀನಾದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಮ್ಮ ರಾಷ್ಟ್ರೀಯ ಭದ್ರತೆ, ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸನ್ನದ್ಧವಾಗುತ್ತಿವೆ. ಜಗತ್ತು ಹೆಚ್ಚು ಹೆಚ್ಚು ಸಂಪರ್ಕಿತವಾಗುತ್ತಿರುವಾಗ ತಂತ್ರಜ್ಞಾನದ ಅವಲಂಬನೆಯೂ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರಾಷ್ಟ್ರಗಳೂ ಜಾಗರೂಕವಾಗಿದ್ದು, ಸೈಬರ್ ಅಪಾಯದ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.