ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ - 3ಡಿ ಸೆಕೆಂಡ್ ರಿಪೀಟ್ (ಇನ್ಸಾಟ್-3ಡಿಎಸ್) ಒಂದು ಹವಾಮಾನ ಉಪಗ್ರಹವಾಗಿದ್ದು, ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿದೆ. ಈ ಉಪಗ್ರಹ ಜಿಎಸ್ಎಲ್‌ವಿ-ಎಫ್14 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲು ಸನ್ನದ್ಧವಾಗಿದೆ. ಇನ್ಸಾಟ್-3ಡಿಎಸ್ ಉಪಗ್ರಹದ ಪ್ರಮುಖ ಉದ್ದೇಶವೆಂದರೆ, ಪ್ರಸ್ತುತ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, 2013ರಲ್ಲಿ ಉಡಾವಣೆಗೊಂಡ ಇನ್ಸಾಟ್-3ಡಿ, 2016ರಲ್ಲಿ ಉಡಾವಣೆಗೊಂಡ ಇನ್ಸಾಟ್-3ಡಿಆರ್ (ರಿಪೀಟ್) ಉಪಗ್ರಹಗಳು ಒದಗಿಸುತ್ತಾ ಬಂದ ಸೇವೆಗಳನ್ನು ಮುಂದುವರಿಸುವುದಾಗಿದೆ. ಈ ಮಹತ್ವದ ಉಪಗ್ರಹ ಫೆಬ್ರವರಿ 17, 2024ರಂದು ಸಂಜೆ 5:30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದ್ದು, ಭಾರತದ ಹವಾಮಾನ ವೀಕ್ಷಣಾ ಸಾಮರ್ಥ್ಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಲಿದೆ.


COMMERCIAL BREAK
SCROLL TO CONTINUE READING

ತನ್ನ 16ನೇ ಹಾರಾಟದಲ್ಲಿ, ಜಿಎಸ್ಎಲ್‌ವಿ ಇನ್ಸಾಟ್-3ಡಿಎಸ್ ಹವಾಮಾನ ಉಪಗ್ರಹವನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ (ಜಿಟಿಒ) ತಲುಪಿಸಲಿದೆ. ಇದರ ನಂತರ ನಡೆಯುವ ಕಕ್ಷೆ ಎತ್ತರಿಸುವ ಚಟುವಟಿಕೆಗಳು ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.


ಜಿಟಿಒ ಮತ್ತು ಭೂಸ್ಥಿರ ಕಕ್ಷೆಗಳ ವಿವರ


ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಎನ್ನುವುದು ಸಾಮಾನ್ಯವಾಗಿ ಹೆಚ್ಚಿನ ಅಂಡಾಕಾರದ ಕಕ್ಷೆಯಾಗಿದ್ದು, ಒಂದು ಉಪಗ್ರಹವನ್ನು ಭೂಮಿಯ ಮೇಲ್ಮೈಯಿಂದ ಜಿಯೋಸಿಂಕ್ರೊನಸ್ ಕಕ್ಷೆಗೆ ಸಾಗಿಸಲು ಬಳಕೆಯಾಗುತ್ತದೆ. ಇದು 250 ಕಿಲೋಮೀಟರ್‌ಗಳ ಪೆರಿಜೀ ಮತ್ತು 35,786 ಕಿಲೋಮೀಟರ್‌ಗಳ ಅಪೊಜೀ ಹೊಂದಿದೆ. ಭೂಸ್ಥಿರ ಕಕ್ಷೆ (ಜಿಯೋಸ್ಟೇಷನರಿ ಆರ್ಬಿಟ್ - ಜಿಇಒ) ಒಂದು ವೃತ್ತಾಕಾರದ ಕಕ್ಷೆಯಾಗಿದ್ದು, ಭೂಮಿಯ ಸಮಭಾಜಕ ವೃತ್ತದಿಂದ 35,786 ಕಿಲೋಮೀಟರ್ ಎತ್ತರದಲ್ಲಿದೆ. ಇಲ್ಲಿ ಉಪಗ್ರಹದ ಪರಿಭ್ರಮಣಾ ಅವಧಿ ಭೂಮಿಯ ಸುತ್ತುವ ಅವಧಿಗೆ ಸಮನಾಗಿರುತ್ತದೆ. ಆ ಮೂಲಕ ಈ ಕಕ್ಷೆ ಉಪಗ್ರಹಕ್ಕೆ ಭೂಮಿಯ ಒಂದು ನಿರ್ದಿಷ್ಟ ಬಿಂದುವಿಗೆ ಸ್ಥಿರವಾಗಿರಲು ನೆರವಾಗುತ್ತದೆ.


ಪೆರಿಜೀ ಎನ್ನುವುದು ಒಂದು ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸನಿಹದಲ್ಲಿರುವ ಬಿಂದುವಾಗಿದೆ. ಇನ್ನು ಅಪೊಜೀ ಎನ್ನುವುದು ಆ ಕಕ್ಷೆಯಲ್ಲಿರುವ ಭೂಮಿಗೆ ಅತ್ಯಂತ ದೂರದ ಬಿಂದುವಾಗಿದೆ.


ಜಿಎಸ್ಎಲ್‌ವಿ-ಎಫ್14: ಬಾಹ್ಯಾಕಾಶ ಉಡಾವಣೆಯ ಅದ್ಭುತ


ಜಿಎಸ್ಎಲ್‌ವಿ-ಎಫ್14 ರಾಕೆಟ್ ಭಾರತದ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಕೈಗನ್ನಡಿಯಾಗಿದ್ದು, 51.7 ಮೀಟರ್ ಎತ್ತರ ಹೊಂದಿದೆ. ಈ ಬೃಹತ್ ರಾಕೆಟ್ 420 ಟನ್‌ಗಳ ಭಾರೀ ಉಡಾವಣಾ ತೂಕ ಹೊಂದಿದೆ.


ಈ ರಾಕೆಟ್ ಅನ್ನು ಅತ್ಯಂತ ಸರಳವಾಗಿ ಮತ್ತು ದಕ್ಷವಾಗಿ ವಿನ್ಯಾಸಗೊಳಿಸಲಾಗಿದ್ದು, ಮೂರು ಹಂತಗಳ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದೆ. ಇದರ ಮೊದಲ ಹಂತವನ್ನು ಜಿಎಸ್1 ಎನ್ನಲಾಗಿದ್ದು, 139 ಟನ್‌ಗಳ ಪ್ರೊಪೆಲೆಂಟ್ ಇರುವ ಘನ ಇಂಧನ ಮೋಟರ್ ಹೊಂದಿದೆ. ಇದಕ್ಕೆ ನಾಲ್ಕು ಹೆಚ್ಚುವರಿ ಬೂಸ್ಟರ್‌ಗಳ ಬೆಂಬಲವಿದ್ದು, ಅವು ತಲಾ 40 ಟನ್ ದ್ರವ ಇಂಧನ ಹೊಂದಿರುತ್ತವೆ.


ಇದರ ಪ್ರಯಾಣ ಎರಡನೇ ಹಂತದಲ್ಲೂ ಮುಂದುವರಿಯುತ್ತದೆ. ಜಿಎಸ್2 ಎಂಬ ಹೆಸರಿನ ಎರಡನೇ ಹಂತವೂ ಇನ್ನೊಂದು 40 ಟನ್ ದ್ರವ ಇಂಧನ ಹೊಂದಿರುತ್ತದೆ. ರಾಕೆಟ್‌ಗೆ ಬಾಹ್ಯಾಕಾಶಕ್ಕೆ ಅಂತಿಮ ತಳ್ಳುವಿಕೆಯನ್ನು ಜಿಎಸ್3 ಎಂಬ ಹೆಸರಿನ ಮೂರನೇ ಹಂತ ಒದಗಿಸುತ್ತದೆ. ಇದು ಕ್ರಯೋಜನಿಕ್ ಇಂಜಿನ್ ಹೊಂದಿದ್ದು, 15 ಟನ್‌ಗಳಷ್ಟು ದ್ರವ ಆಮ್ಲಜನಕ ಮತ್ತು ದ್ರವ ಜಲಜನಕವನ್ನು ಇಂಧನವಾಗಿ ಹೊಂದಿದೆ.


ಇನ್ಸಾಟ್-3ಡಿಎಸ್: ಒಂದು ಸಹಯೋಗದ ಯೋಜನೆ


ಈ ಉಪಗ್ರಹ ಯೋಜನೆಗೆ ಇದರ ಬಳಕೆದಾರರು ಆರ್ಥಿಕ ಶಕ್ತಿ ಒದಗಿಸಿದ್ದು, ಪ್ರಾಥಮಿಕವಾಗಿ ಭೂ ವಿಜ್ಞಾನ ಸಚಿವಾಲಯದ ಮೂಲಕ ಹಣ ಒದಗಿಸಲಾಗಿದೆ. ಇದನ್ನು ಇಸ್ರೋ ಅಭಿವೃದ್ಧಿ ಪಡಿಸಿರುವ, 2,275 ಕೆಜಿಗಳ ಉಡಾವಣಾ ತೂಕ ಹೊಂದಿರುವ, ಅತ್ಯಂತ ನಂಬಿಕಾರ್ಹವಾದ ಐ-2ಕೆ ಬಸ್ ಪ್ಲಾಟ್‌ಫಾರಂ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅದರೊಡನೆ, ಉಪಗ್ರಹದ ನಿರ್ಮಾಣಕ್ಕಾಗಿ ವಿವಿಧ ಭಾರತೀಯ ಉದ್ಯಮಗಳೂ ಕೊಡುಗೆ ನೀಡಿವೆ.


ಐ-2ಕೆ ಉಪಗ್ರಹ ಚೌಕಟ್ಟು ಎಂದರೇನು?


ಸ್ಯಾಟಲೈಟ್ ಬಸ್ ಅಥವಾ ಸ್ಪೇಸ್‌ಕ್ರಾಫ್ಟ್ ಬಸ್ ಎಂದೂ ಕರೆಯಲ್ಪಡುವ ಈ ಚೌಕಟ್ಟು ಒಂದು ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯ ಮೂಲ ಆಕಾರವಾಗಿರುತ್ತದೆ. ಇದು ಪೇಲೋಡ್‌ಗಳು ಮತ್ತು ಇತರ ಎಲ್ಲ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸುವ ಮೂಲ ವಿನ್ಯಾಸವಾಗಿ ಕಾರ್ಯಾಚರಿಸುತ್ತದೆ.


ಐ-2ಕೆ ಒಂದು ರೀತಿಯ ಉಪಗ್ರಹ ಚೌಕಟ್ಟಾಗಿದ್ದು, ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿದ್ದು, ಅಂತ್ರಿಕ್ಸ್ ಕಾರ್ಪೋರೇಷನ್ ಮಾರಾಟ ನಡೆಸುತ್ತಿದೆ. ಇದನ್ನು ಅಂದಾಜು 2,000 ಕೆಜಿ ತೂಕದ ಉಪಗ್ರಹಗಳಿಗಾಗಿ ವಿನ್ಯಾಸಗೊಳಿಸಿದ್ದು, ಐ-2ಕೆ ಎಂಬಲ್ಲಿ 'ಐ' ಇಸ್ರೋ ಉಡಾವಣೆಗೊಳಿಸುವ ಇನ್ಸಾಟ್ ಸರಣಿಯ ಸಂವಹನ ಉಪಗ್ರಹಗಳನ್ನು ಸೂಚಿಸುತ್ತದೆ. ಇಸ್ರೋದ ಉಪಗ್ರಹ ಚೌಕಟ್ಟುಗಳನ್ನು ನಿರ್ದಿಷ್ಟವಾಗಿ ಸಣ್ಣ ಅಥವಾ ಮಧ್ಯಮ ಗಾತ್ರದ ಉಪಗ್ರಹಗಳಿಗೆ ಪೂರಕವಾಗುವಂತೆ ನಿರ್ಮಿಸಲಾಗುತ್ತದೆ. ಐ-2ಕೆ ಮಾದರಿ 3,000 ವ್ಯಾಟ್ಸ್ ತನಕ ಡಿಸಿ ವಿದ್ಯುತ್ ಒದಗಿಸಬಲ್ಲದಾಗಿದ್ದು, 1500ರಿಂದ 2,500 ಕೆಜಿಗಳ ನಡುವಿನ ತೂಕ ಹೊಂದಿರುವ ಉಪಗ್ರಹಗಳಿಗೆ ಪೂರಕವಾಗಿದೆ.


ಇನ್ಸಾಟ್-3ಡಿಎಸ್: 4 ಪೇಲೋಡ್‌ಗಳು


ಇನ್ಸಾಟ್-3ಡಿಎಸ್ ಉಪಗ್ರಹ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದ್ದು, ಪೂರ್ಣ ಪ್ರಮಾಣದ ಹವಾಮಾನ ಮುನ್ಸೂಚನೆ ಮತ್ತು ಸಂವಹನ ಸಾಮರ್ಥ್ಯಗಳನ್ನು ಒದಗಿಸಲು ವಿವಿಧ ಪೇಲೋಡ್‌ಗಳನ್ನು ಹೊಂದಿದೆ. ಅವೆಂದರೆ, i) 6 ಚಾನೆಲ್ ಇಮೇಜರ್, ii) ಹವಾಮಾನ ವೀಕ್ಷಣೆಗಾಗಿ 19 ಚಾನೆಲ್ ಸೌಂಡರ್, iii) ಸಂವಹನ ಉಪಕರಣವಾದ ಡೇಟಾ ರಿಲೇ ಟ್ರಾನ್ಸ್‌ಪಾಂಡರ್ (ಡಿಆರ್‌ಟಿ) ಮತ್ತು iv) ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಎಸ್ಎಎಸ್&ಆರ್) ಟ್ರಾನ್ಸ್‌ಪಾಂಡರ್‌ಗಳಾಗಿವೆ.


i) 6 ಚಾನೆಲ್ ಮಲ್ಟಿಸ್ಪೆಕ್ಟ್ರಲ್ ಇಮೇಜರ್: ಉಪಗ್ರಹದಲ್ಲಿರುವ 6 ಚಾನೆಲ್ ಮಲ್ಟಿಸ್ಪೆಕ್ಟ್ರಲ್ ಇಮೇಜರ್ ಉಪಕರಣ ಆರು ಬೆಳಕಿನ ವರ್ಣಪಟಲಗಳನ್ನು ಬಳಸಿಕೊಂಡು, ಭೂಮಿಯ ಛಾಯಾಚಿತ್ರಗಳನ್ನು ಚಿತ್ರಿಸುತ್ತದೆ. ಇದು ನಿರ್ದಿಷ್ಟ ತರಂಗಾಂತರಗಳನ್ನು ಚಿತ್ರಿಸಿ, ಅತಿಗೆಂಪು ವಿಕಿರಣದಲ್ಲಿ ಸಸ್ಯಗಳ ಆರೋಗ್ಯ ಅಥವಾ ದೃಗ್ಗೋಚರ ಬೆಳಕಿನಲ್ಲಿ ಭೂ ವೈಶಿಷ್ಟ್ಯಗಳನ್ನು ಗಮನಿಸುತ್ತದೆ. ಈ ಉಪಕರಣ ಹವಾಮಾನ ಪರಿಶೀಲನೆ ನಡೆಸಲು, ಕೃಷಿ ಹಂತಗಳನ್ನು ತಿಳಿಯಲು, ಹಾಗೂ ವಾತಾವರಣದ ಬದಲಾವಣೆಗಳನ್ನು ಅಧ್ಯಯನ ನಡೆಸಲು ಅತ್ಯಂತ ಮಹತ್ವದ್ದಾಗಿದೆ.


ಆರು ಚಾನೆಲ್ ಎನ್ನುವುದು ಛಾಯಾಚಿತ್ರಗಳನ್ನು ಆರು ವಿವಿಧ ಬೆಳಕಿನ ವರ್ಣಪಟಲಗಳಲ್ಲಿ ಸೆರೆಹಿಡಿಯುತ್ತದೆ. ಆ ಮೂಲಕ ವಾತಾವರಣ, ಹವಾಮಾನ ಮತ್ತು ಭೂ ಮೇಲ್ಮೈ ವೈಶಿಷ್ಟ್ಯಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ನೆರವಾಗುತ್ತದೆ.


ii) 19 ಚಾನೆಲ್ ಸೌಂಡರ್: ಉಪಗ್ರಹದಲ್ಲಿರುವ 19 ಚಾನೆಲ್ ಸೌಂಡರ್ ಉಪಕರಣ 19 ವಿವಿಧ ರೀತಿಯ ತರಂಗಾಂತರಗಳನ್ನು ಬಳಸಿಕೊಂಡು, ವಾತಾವರಣದ ತಾಪಮಾನಗಳು, ಆರ್ದ್ರತೆಯ ಮಟ್ಟಗಳು, ಮತ್ತು ಅನಿಲಗಳ ದಟ್ಟತೆಯನ್ನು ಅಳೆಯುತ್ತದೆ. ಈ ವಿಸ್ತೃತ ಮಾಹಿತಿ ಸಂಗ್ರಹಣೆ ನಿಖರ ಹವಾಮಾನ ಮುನ್ಸೂಚನೆ ನೀಡಲು, ವಾತಾವರಣ ಬದಲಾವಣೆಯ ಅಧ್ಯಯನ ನಡೆಸಲು, ವಾತಾವರಣದ ಸಂಶೋಧನೆ ಮತ್ತು ಸುರಕ್ಷತೆಗಾಗಿ ಭೂಮಿಯ ಹವಾಮಾನ ಅಧ್ಯಯನ ಕೈಗೊಳ್ಳಲು ನೆರವಾಗುತ್ತದೆ.


iii) ಡಿಆರ್‌ಟಿ: ಡಿಆರ್‌ಟಿ ಅನ್ನು ವಿವಿಧ ಮಾಹಿತಿ ಸಂಗ್ರಹಣಾ ಬಿಂದುಗಳಿಂದ ಮತ್ತು ಹವಾಮಾನ ಕೇಂದ್ರಗಳಿಂದ ಹವಾಮಾನ, ನೀರು ಮತ್ತು ಸಾಗರ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಲು ನೆರವಾಗಿ, ನಿಖರ ಹವಾಮಾನ ಮುನ್ಸೂಚನೆಗಳನ್ನು ಅರಿಯಲು ನೆರವಾಗುತ್ತದೆ.


iv) ಎಸ್ಎಎಸ್&ಆರ್ ಟ್ರಾನ್ಸ್‌ಪಾಂಡರ್: ಎಸ್ಎಎಸ್&ಆರ್ ಟ್ರಾನ್ಸ್‌ಪಾಂಡರ್ ಬೀಕಾನ್ ಟ್ರಾನ್ಸ್‌ಮಿಟರ್‌ಗಳಿಂದ ಬರುವ ಎಸ್ಒಎಸ್ ಸಂಕೇತಗಳ ಆಧಾರದಲ್ಲಿ ಜಾಗತಿಕ ಪತ್ತೆ ಮತ್ತು ರಕ್ಷಣಾ ಕಾರ್ಯಗಳಿಗೆ ಅತ್ಯಂತ ಅವಶ್ಯಕವಾಗಿದೆ. ಆ ಮೂಲಕ ವಿಶಾಲ ವ್ಯಾಪ್ತಿಯ ಪತ್ತೆ ಮತ್ತು ಪ್ರತಿಕ್ರಿಯಾ ಸಾಮರ್ಥ್ಯವನ್ನು ಒದಗಿಸುತ್ತದೆ.


ಇನ್ಸಾಟ್-3ಡಿಎಸ್ ಉಪಗ್ರಹ ಕಲೆಹಾಕುವ ಮಾಹಿತಿಗಳು ಹವಾಮಾನ ಇಲಾಖೆ (ಐಎಂಡಿ), ನ್ಯಾಷನಲ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫಾರ್‌ಕಾಸ್ಟಿಂಗ್ (ಎನ್‌ಸಿಎಂಆರ್‌ಡಬ್ಲ್ಯುಎಫ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯಾರಾಲಜಿ (ಐಐಟಿಎಂ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿ (ಎನ್ಐಒಟಿ) ಮತ್ತು ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶನ್ ಇನ್ಫಾರ್ಮೇಶನ್ ಸರ್ವಿಸಸ್ (ಐಎನ್‌ಸಿಒಐಎಸ್) ಸೇರಿದಂತ, ಭೂ ವಿಜ್ಞಾನ ಸಚಿವಾಲಯಕ್ಕೆ ಸೇರಿದ ವಿವಿಧ ಸಂಸ್ಥೆಗಳು ಮತ್ತು ಶಾಖೆಗಳಿಗೆ ನೆರವಾಗುತ್ತವೆ. ಈ ಸಂಸ್ಥೆಗಳು ಉಪಗ್ರಹದಿಂದ ಕಲೆಹಾಕುವ ಮಾಹಿತಿಗಳನ್ನು ಹವಾಮಾನ ಮುನ್ಸೂಚನಾ ಸಾಮರ್ಥ್ಯವನ್ನು ವೃದ್ಧಿಸಲು ಬಳಸಿಕೊಂಡು, ದೇಶಾದ್ಯಂತ ಉತ್ತಮ ಹವಾಮಾನ ಮಾಹಿತಿ ಸೇವೆಗಳನ್ನು ಒದಗಿಸುತ್ತವೆ.


-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.