JUICE Mission: ಸೌರಮಂಡಲದ ಕುರಿತ ಅನ್ವೇಷಣೆಗಳು ಅತ್ಯಂತ ಆಸಕ್ತಿದಾಯಕವಾಗಿದ್ದು, ಕಳೆದ ಹಲವು ದಶಕಗಳಿಂದಲೂ ನಡೆದುಬರುತ್ತಿವೆ. ಪ್ರತಿಯೊಂದು ಯೋಜನೆಯೂ ಸೌರವ್ಯೂಹದ ಕುರಿತಾದ ಹೊಸ ಹೊಳಹುಗಳನ್ನು ಒದಗಿಸುತ್ತಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಮಹತ್ವಾಕಾಂಕ್ಷಿ ಯೋಜನೆಯಾದ ಜ್ಯುಪೀಟರ್ ಐಸಿ ಮೂನ್ ಎಕ್ಸ್‌ಪ್ಲೋರರ್‌ (ಜ್ಯೂಸ್) ಇಂದು, ಅಂದರೆ ಎಪ್ರಿಲ್ 13ರಂದು ಉಡಾವಣೆಗೆ ಸಿದ್ಧವಾಗಿದ್ದು, ಅತ್ಯಂತ ಆಸಕ್ತಿಕರ ಯೋಜನೆಯಾಗಿದೆ. ಈ ಉಡಾವಣೆ 13:15 ಬಿಎಸ್‌ಟಿಗೆ (ಭಾರತೀಯ ಕಾಲಮಾನದಲ್ಲಿ ಸಂಜೆ 5:45) ಯುರೋಪಿನ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿರುವ ಅರಿಯಾನ್ 5 ಮೂಲಕ ನೆರವೇರಲಿದೆ. ಉಡಾವಣೆ ಯುರೋಪಿನ ಬಾಹ್ಯಾಕಾಶ ಕೇಂದ್ರವಾದ ಫ್ರೆಂಚ್ ಗಯಾನಾದಿಂದ ನೆರವೇರಲಿದ್ದು, ಗುರು ಗ್ರಹ ಮತ್ತು ಅದರ ಚಂದ್ರರನ್ನು ತಲುಪಲು ಎಂಟು ವರ್ಷಗಳ ಕಾಲ ಪ್ರಯಾಣ ಬೆಳೆಸಲಿದೆ.


COMMERCIAL BREAK
SCROLL TO CONTINUE READING

ಜ್ಯುಪೀಟರ್ ಐಸಿ ಮೂನ್ ಎಕ್ಸ್‌ಪ್ಲೋರರ್‌ (ಜ್ಯೂಸ್) ಯೋಜನೆಯ ಪ್ರಾಥಮಿಕ ಉದ್ದೇಶ ಗುರು ಗ್ರಹದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು. ಅದರಲ್ಲೂ ವಿಶೇಷವಾಗಿ ಗುರು ಗ್ರಹದ ಮೂರು ಪ್ರಮುಖ ಚಂದ್ರಗಳಾದ ಗೆನಿಮೇಡ್, ಯುರೋಪಾ, ಹಾಗೂ ಕ್ಯಾಲಿಸ್ಟೋಗಳನ್ನು ಅಧ್ಯಯನ ಮಾಡುವುದು. ಈ ಮೂರೂ ಚಂದ್ರರ ಮೇಲ್ಮೈಯ ಕೆಳಗೆ ಸಮುದ್ರಗಳಿದ್ದು, ಅವುಗಳು ಜೀವ ವಿಕಾಸಕ್ಕೆ ಪೂರಕವಾಗಿವೆ ಎನ್ನಲಾಗಿದೆ. ಅವುಗಳ ಮೇಲ್ಮೈ, ಸಂಯೋಜನೆ, ವಾಸಯೋಗ್ಯತೆಗಳನ್ನು ಅಧ್ಯಯನ ನಡೆಸುವ ಮೂಲಕ ಜ್ಯೂಸ್ ಈ ಚಂದ್ರರಲ್ಲಿ ಜೀವಿಗಳಿರುವ ಸಾಧ್ಯತೆಗಳನ್ನು ತಿಳಿಯಲಿದೆ.


ಈ ಯೋಜನೆ ಗುರು ಗ್ರಹ ಹಾಗೂ ಅಮಲ್ಥಿಯಾ ಸೇರಿದಂತೆ ಗುರುವಿನ ಚಂದ್ರರ ವಾತಾವರಣ, ಕಾಂತಗೋಳವನ್ನು ಅಧ್ಯಯನ ನಡೆಸಲಿದೆ. ಈ ಸ್ಪೇಸ್ ಕ್ರಾಫ್ಟ್ ವೈಜ್ಞಾನಿಕ ಉಪಕರಣಗಳನ್ನೂ ಒಯ್ಯಲಿದ್ದು, ಅದರಲ್ಲಿ ಕ್ಯಾಮರಾಗಳು, ಸ್ಪೆಕ್ಟ್ರೋಮೀಟರ್‌ಗಳು, ಹಾಗೂ ಲೇಸರ್ ಆಲ್ಟಿಮೀಟರ್‌ಗಳು ಗುರು ಗ್ರಹದ ಕೂಲಂಕಷ ಅಧ್ಯಯನಕ್ಕೆ ನೆರವಾಗಲಿವೆ.


ಇದನ್ನೂ ಓದಿ- ಸೋರಿಕೆಯಾದ ರಹಸ್ಯ ದಾಖಲೆಗಳು: ಅಮೆರಿಕಾದಲ್ಲಿ ಮಹಾನ್ ಗುಪ್ತಚರ ಉಲ್ಲಂಘನೆ?


ಜ್ಯೂಸ್ ಯೋಜನೆಯ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಯುರೋಪಾದ ಅಧ್ಯಯನ. ಯುರೋಪಾ ಚಂದ್ರ ಸೌರಮಂಡಲದಲ್ಲಿ ಜೀವ ವಿಕಾಸದ ಕುರಿತು ಅತ್ಯಂತ ಭರವಸೆಯ ತಾಣ ಎನ್ನಲಾಗಿದೆ. ಯುರೋಪಾದ ಮೇಲ್ಮೈಯ ಕೆಳಭಾಗದಲ್ಲಿ ಭೂಮಿಯಲ್ಲಿರುವ ಒಟ್ಟಾರೆ ನೀರಿನ ಪ್ರಮಾಣದ ಎರಡರಷ್ಟು ನೀರಿದೆ ಎನ್ನಲಾಗಿದೆ. ಯುರೋಪಾದ ಮೇಲ್ಮೈಯಲ್ಲಿರುವ ಬಿರುಕುಗಳು ಈ ಸಮುದ್ರದೆಡೆ ಹಾದಿ ಮಾಡಿಕೊಡಬಹುದು ಎನ್ನಲಾಗಿದೆ.


ಜ್ಯೂಸ್ ಯುರೋಪಾದ ಮೇಲ್ಮೈ ಹಾಗೂ ಒಳಮೈಯನ್ನು ಅಧ್ಯಯನ ನಡೆಸಲು ಹಲವು ವೈಜ್ಞಾನಿಕ ಉಪಕರಣಗಳನ್ನು ಬಳಸಲಿದೆ. ಅದರಲ್ಲಿ ರೇಡಾರ್ ಉಪಕರಣವೂ ಸೇರಿದ್ದು, ಚಂದ್ರನ ಮಂಜಿನ ಮೂಲಕ ತೂರಿ, ಒಳಗಿರುವ ಸಮುದ್ರದ ಅಧ್ಯಯನ ನಡೆಸಬಲ್ಲದು. ಈ ಯೋಜನೆ ಚಂದ್ರನ ಕಾಂತಕ್ಷೇತ್ರದ ಕುರಿತು ಅಧ್ಯಯನ ನಡೆಸಿ, ಅದರ ಕೆಳಗಿರುವ ಸಮುದ್ರದ ಸಂರಚನೆಯನ್ನು ತಿಳಿಯಲಿದೆ.


ಇನ್ನೊಂದು ಪ್ರಮುಖ ವಿಚಾರವೆಂದರೆ, ಗೆನಿಮೇಡ್ ಎಂಬ ಗುರು ಗ್ರಹದ ಅತಿದೊಡ್ಡ ಚಂದ್ರನ ಪರಿಶೋಧನೆ. ಗೆನಿಮೇಡ್ ಸೌರಮಂಡಲದ ಚಂದ್ರರಲ್ಲಿ ಸ್ವಂತವಾದ ಕಾಂತಕ್ಷೇತ್ರ ಹೊಂದಿರುವ ಏಕೈಕ ಚಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜ್ಯೂಸ್ ಮಿಷನ್ ಈ ಕಾಂತಕ್ಷೇತ್ರದ ಅಧ್ಯಯನ ನಡೆಸಿ, ಅದರ ಒಳಮೈ ರಚನೆಯನ್ನು ತಿಳಿಯಲು ನೆರವಾಗಲಿದೆ.


ಜ್ಯೂಸ್ ಮಿಷನ್ ಒಳಮೈ ಸಾಗರ ಹಾಗೂ ಸಂಕೀರ್ಣ ರಚನೆ ಹೊಂದಿರುವ ಗುರು ಗ್ರಹದ ಇನ್ನೊಂದು ಚಂದ್ರ ಕ್ಯಾಲಿಸ್ಟೋದ ಅಧ್ಯಯನವನ್ನೂ ನಡೆಸಲಿದೆ. ಇದಕ್ಕಾಗಿ ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹಾಗೂ ಚಂದ್ರನ ಮೇಲ್ಮೈಯ ಅತ್ಯುತ್ಕೃಷ್ಟ ಛಾಯಚಿತ್ರಗಳನ್ನು ಸೆರೆಹಿಡಿಯುವ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತದೆ.


ಇದನ್ನೂ ಓದಿ- Indian Space Policy 2023: ಖಾಸಗಿ ಸಂಸ್ಥೆಗಳಿಗೆ ಉಪಗ್ರಹ, ರಾಕೆಟ್ ನಿರ್ಮಿಸುವ ಅವಕಾಶ ಮಾಡಿಕೊಡಲಿದೆ ಭಾರತೀಯ ಬಾಹ್ಯಾಕಾಶ ನೀತಿ 2023


ಜ್ಯೂಸ್ ಮಿಷನ್ ಇಎಸ್ಎ ಹಾಗೂ ಹಲವು ಅಂತಾರಾಷ್ಟ್ರೀಯ ಸಹಯೋಗಿಗಳ ಜಂಟಿ ಯೋಜನೆಯಾಗಿದ್ದು, ಅದರಲ್ಲಿ ನಾಸಾ ಸಹ ಭಾಗವಾಗಿದೆ. ಈ ಯೋಜನೆ ನಾಸಾದ ಯುರೋಪಾ ಕ್ಲಿಪ್ಪರ್ ಯೋಜನೆ ಸೇರಿದಂತೆ ಭವಿಷ್ಯದ ಸೌರಮಂಡಲದ ಅಧ್ಯಯನ ಯೋಜನೆಗಳಿಗೆ ಪೂರಕ ಮಾಹಿತಿ ಒದಗಿಸಲಿದೆ.


ಜ್ಯೂಸ್ ಸ್ಪೇಸ್ ಕ್ರಾಫ್ಟ್ ಸೋಲಾರ್ ಪ್ಯಾನೆಲ್‌ಗಳಿಂದ ಶಕ್ತಿ ಪಡೆಯಲಿದ್ದು, ಭೂಮಿ, ಶುಕ್ರ ಮತ್ತು ಮಂಗಳ ಗ್ರಹಗಳ ಗುರುತ್ವಾಕರ್ಷಣಾ ಬಲದ ಸಹಾಯ ಪಡೆದು, ಗುರು ಗ್ರಹವನ್ನು ತಲುಪಲಿದೆ. ಒಂದು ಬಾರಿ ಗುರು ಗ್ರಹವನ್ನು ತಲುಪಿದ ಬಳಿಕ, ಸ್ಪೇಸ್ ಕ್ರಾಫ್ಟ್ ಆ ದೈತ್ಯ ಗ್ರಹದ ಕಕ್ಷೆಯನ್ನು ಪ್ರವೇಶಿಸಿ, ಗುರು ಗ್ರಹದ ವ್ಯವಸ್ಥೆಯ ಕುರಿತಾದ ಅಧ್ಯಯನ ಆರಂಭಿಸಲಿದೆ.


ಒಟ್ಟಾರೆಯಾಗಿ ಸೌರಮಂಡಲದ ಕುರಿತು ಇನ್ನಷ್ಟು ಜ್ಞಾನ, ಮಾಹಿತಿಗಳನ್ನು ಪಡೆಯಲು ಈ ಜ್ಯೂಸ್ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.