ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ - ಎಐ) ವಿವಿಧ ಉದ್ಯಮಗಳಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದೆ. ಇದರಿಂದ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಕಳೆದ ಕೆಲವು ವರ್ಷಗಳಿಂದ, ಕೃತಕ ಬುದ್ಧಿಮತ್ತೆ ಮಾಧ್ಯಮ ಮಾಹಿತಿಗಳು, ವರದಿಗಳು, ವಿಚಾರಗಳು ಸಿದ್ಧಗೊಳ್ಳುವ, ಹಂಚಿಕೆಯಾಗುವ ಮತ್ತು ಗ್ರಹಿಸಲ್ಪಡುವ ವಿಧಾನವನ್ನು ಬದಲಾಯಿಸಿದೆ. ಈ ಲೇಖನದಲ್ಲಿ, ಕೃತಕ ಬುದ್ಧಿಮತ್ತೆಯ ವಿಚಾರದಲ್ಲಿ ಆಗಿರುವ ಆಧುನೀಕರಣಗಳು ಮತ್ತು ನಮ್ಮ ಮಾಧ್ಯಮ ಬಳಕೆಯ ಮೇಲೆ ಅವುಗಳಿಂದ ಆಗಿರುವ ಪರಿಣಾಮಗಳನ್ನು ಅನ್ವೇಷಿಸೋಣ.


COMMERCIAL BREAK
SCROLL TO CONTINUE READING

ವಿಷಯ - ವಿಚಾರಗಳ ಸೃಷ್ಟಿ:
ಮಾಧ್ಯಮ ವಿಷಯಗಳನ್ನು ಸಿದ್ಧಪಡಿಸುವಲ್ಲಿ ಎಐ ಹೆಚ್ಚು ಹೆಚ್ಚು ಪ್ರಾವೀಣ್ಯತೆ ಗಳಿಸಿಕೊಳ್ಳುತ್ತಿದೆ. ಎಐ ಆಧಾರಿತ ಸ್ವಯಂಚಾಲಿತ ವರದಿ ನಿರ್ಮಾಣ ಪರಿಕರಗಳಿಂದ ಲೇಖನಗಳು, ಬ್ಲಾಗ್ ಬರಹಗಳು ಮತ್ತು ಸುದ್ದಿಗಳನ್ನೂ ಸಿದ್ಧಪಡಿಸಲು ಸಾಧ್ಯವಾಗುತ್ತಿದೆ. ಈ ವ್ಯವಸ್ಥೆಗಳು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (ಎನ್ಎಲ್‌ಪಿ) ಎಂಬ ಅಲ್ಗಾರಿದಂಗಳನ್ನು ಬಳಸಿ, ಅಪಾರ ಪ್ರಮಾಣದ ಮಾಹಿತಿಗಳನ್ನು ವಿಶ್ಲೇಷಿಸಿ, ಬಳಿಕ ಸೂಕ್ತವಾದ ಮತ್ತು ಅವಶ್ಯಕವಾದ ಮಾಹಿತಿಗಳನ್ನು ಸಿದ್ಧಪಡಿಸುತ್ತವೆ. ಎಐ ನಿರ್ಮಿತ ಮಾಹಿತಿಗಳು ಈಗ ಕ್ರೀಡಾ ವರದಿಗಾರಿಕೆ, ಹಣಕಾಸು ಸುದ್ದಿಗಳು ಮತ್ತು ಹವಾಮಾನ ವರದಿಗಾರಿಕೆಯಲ್ಲಿ ಬಳಕೆಯಾಗುತ್ತಿದ್ದು, ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಓದುಗರಿಗೆ ಸೂಕ್ತ ಸಮಯದಲ್ಲಿ ನಿಖರವಾದ ಮಾಹಿತಿಗಳನ್ನು ಪೂರೈಸಲು ಅನುಕೂಲ ಕಲ್ಪಿಸುತ್ತಿವೆ.


ವೈಯಕ್ತಿಕವಾಗಿ ಹೊಂದುವ ಶಿಫಾರಸುಗಳು:
ಎಐ ಅಲ್ಗಾರಿದಂಗಳು ಸಮೂಹ ಮಾಧ್ಯಮಗಳು ಬಳಕೆದಾರರಿಗೆ ಹೇಗೆ ಸೂಚಿಸಲ್ಪಡಬಹುದು ಎಂಬುದರಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಸ್ಟ್ರೀಮಿಂಗ್ ವೇದಿಕೆಗಳು, ಸಾಮಾಜಿಕ ಜಾಲತಾಣಗಳು, ಹಾಗೂ ಸುದ್ದಿ ತಾಣಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ತಮ್ಮ ಬಳಕೆದಾರರ ಆಯ್ಕೆಗಳು ಮತ್ತು ಆದ್ಯತೆಗಳನ್ನು ವಿಶ್ಲೇಷಿಸಿ, ಅವರಿಗೆ ಸೂಕ್ತವಾದ ಆಯ್ಕೆಗಳನ್ನು ಶಿಫಾರಸು ಮಾಡುತ್ತವೆ. ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್) ತಂತ್ರಗಳನ್ನು ಬಳಸಿಕೊಳ್ಳುವುದರಿಂದ, ಈ ಸಮೂಹ ಮಾಧ್ಯಮ ವೇದಿಕೆಗಳು ಬಳಕೆದಾರರ ಆಯ್ಕೆಗೆ ಸೂಕ್ತವಾಗುವಂತಹ ಚಲನಚಿತ್ರಗಳು, ಸರಣಿಗಳು, ಲೇಖನಗಳು ಮತ್ತು ಸುದ್ದಿಗಳನ್ನು ಒದಗಿಸಿ, ಅವರ ಒಟ್ಟಾರೆ ಮಾಧ್ಯಮ ಬಳಕೆಯ ಅನುಭವವನ್ನು ಉತ್ತಮಗೊಳಿಸಬಲ್ಲವು.


ಸುಧಾರಿತ ಜಾಹೀರಾತು:
ಎಐ ಆಧಾರಿತ ಜಾಹೀರಾತು ಪ್ರಸಾರ ಬಹಳಷ್ಟು ಸುಧಾರಣೆಗಳನ್ನು ಕಂಡಿದೆ. ಜಾಹೀರಾತುದಾರರು ಈಗ ಎಐ ಅಲ್ಗಾರಿದಂಗಳನ್ನು ಬಳಸಿಕೊಂಡು, ತಮ್ಮ ಸಂಭಾವ್ಯ ಗ್ರಾಹಕರು - ಬಳಕೆದಾರರಾಗಬಲ್ಲವರನ್ನು ಗುರುತಿಸಿ, ಅವರಿಗೆ ಸೂಕ್ತವಾದ, ಅವರನ್ನು ಸೆಳೆಯಬಲ್ಲಂತಹ ಜಾಹೀರಾತು ರೂಪಿಸಬಹುದು. ಬಳಕೆದಾರರ ಡೇಟಾ ಮತ್ತು ವರ್ತನೆಯ ಮಾದರಿಗಳನ್ನು ವಿಶ್ಲೇಷಿಸಿ, ಎಐ ಆಧಾರಿತ ವ್ಯವಸ್ಥೆಗಳು ಬಳಕೆದಾರರ ವೈಯಕ್ತಿಕ ಆಸಕ್ತಿಗಳಿಗೆ ಪೂರಕವಾದ ಜಾಹೀರಾತುಗಳನ್ನು ಪ್ರದರ್ಶಿಸಬಲ್ಲವು. ಈ ವ್ಯಕ್ತಿ ಆಧಾರಿತ ಜಾಹೀರಾತು ವಿಧಾನ ಜಾಹೀರಾತಿನ ಪರಿಣಾಮವನ್ನು ಹೆಚ್ಚಿಸುತ್ತದೆ. ಆ ಮೂಲಕ ಜಾಹೀರಾತಿನ ಹೂಡಿಕೆಯ ಮೇಲೆ ಲಾಭ ತರಲು ಸಾಧ್ಯವಾಗುತ್ತದೆ.


ಸ್ವಯಂಚಾಲಿತ ವಿಷಯ ನಿರ್ವಹಣೆ:
ಬಳಕೆದಾರರು ಒದಗಿಸುವ ವಿಚಾರಗಳನ್ನು ನಿರ್ವಹಿಸುವುದು ಹೆಚ್ಚು ಸಮಯ ಪಡೆದುಕೊಳ್ಳುವ ಮತ್ತು ಸವಾಲಿನ ಕೆಲಸವಾಗಿದೆ. ಆದರೆ, ಎಐ ಆಧಾರಿತ ಮಾಹಿತಿ ನಿರ್ವಹಣಾ ವ್ಯವಸ್ಥೆಗಳು ಈ ಪ್ರಕ್ರಿಯೆಯನ್ನು ಹೆಚ್ಚು ದಕ್ಷವೂ, ಪರಿಣಾಮಕಾರಿಯೂ ಆಗಿಸಿವೆ. ಈ ವ್ಯವಸ್ಥೆಗಳು ಕಂಪ್ಯೂಟರ್ ವಿಷನ್ ಮತ್ತು ಎನ್ಎಲ್‌ಪಿ ಎಂಬ ಅಲ್ಗಾರಿದಂಗಳನ್ನು ಬಳಸಿಕೊಂಡು, ಅಸಂಬಂದ್ಧ ಅಥವಾ ಹಾನಿಕಾರಕ ಸಂಗತಿಗಳಾದ ದ್ವೇಷಪೂರಿತ ಮಾತುಗಳು, ಸ್ಪ್ಯಾಮ್, ಅಥವಾ ಗ್ರಾಫಿಕ್ ಚಿತ್ರಗಳನ್ನು ಅಳಿಸಿಹಾಕುತ್ತವೆ. ಎಐ ಆಧಾರಿತ ಮಾಹಿತಿ ನಿರ್ವಹಣೆ ಮಾಧ್ಯಮ ವೇದಿಕೆಗಳು ತಮ್ಮ ಬಳಕೆದಾರರಿಗೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತವೆ.


ಡೀಪ್‌ಫೇಕ್ ಪತ್ತೆಹಚ್ಚುವಿಕೆ:
ಡೀಪ್‌ಫೇಕ್ ತಂತ್ರಜ್ಞಾನ ಎಂದರೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ನೈಜವಾಗಿದೆ ಎಂಬಂತೆ ಭಾಸವಾಗುವಂತಹ ಕೃತಕ ವೀಡಿಯೋ ಅಥವಾ ಚಿತ್ರಗಳನ್ನು ರೂಪಿಸುವುದಾಗಿದೆ. ಈಗ ಡೀಪ್‌ಫೇಕ್ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಅದನ್ನು ಪರಿಣಾಮಕಾರಿಯಾಗಿ ಗುರುತಿಸುವುದು ಅತ್ಯಂತ ಅವಶ್ಯಕವಾಗಿದೆ. ಎಐ ಅಲ್ಗಾರಿದಂಗಳನ್ನು ಬಳಸಿಕೊಂಡು, ಡೀಪ್‌ಫೇಕ್ ಅನ್ನು ಗುರುತಿಸಲು ಸಾಧ್ಯವಾಗುತ್ತದೆ. ಆ ಮೂಲಕ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳು ಹರಿದಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಈ ರೀತಿ ಡೀಪ್‌ಫೇಕ್ ತಂತ್ರಜ್ಞಾನವನ್ನು ಪತ್ತೆಹಚ್ಚುವುದು ದೃಶ್ಯ ಸೂಚನೆಗಳು, ಅಸಂಗತತೆಗಳು, ನೈಜ ಮತ್ತು ಕೃತಕ ದೃಶ್ಯಾವಳಗಳಲ್ಲಿರುವ ಕಲಾತ್ಮಕ ವ್ಯತ್ಯಾಸಗಳನ್ನು ಗುರುತಿಸುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.


ನೈಜ ಸಮಯದಲ್ಲಿ ವಿಶ್ಲೇಷಣೆ:
ಎಐ ಆಧಾರಿತ ಅನಾಲಿಟಿಕ್ಸ್ ಉಪಕರಣಗಳು ಮಾಧ್ಯಮ ಸಂಸ್ಥೆಗಳಿಗೆ ಬಳಕೆದಾರರ ವರ್ತನೆಗಳು, ಮಾಹಿತಿಗಳು ಪ್ರಸಾರವಾಗುವ ಪ್ರಮಾಣ, ಹಾಗೂ ಮಾರುಕಟ್ಟೆಯ ಟ್ರೆಂಡ್ ಅನ್ನು ನೈಜ ಸಮಯದಲ್ಲಿ ತಿಳಿದುಕೊಳ್ಳಲು ನೆರವಾಗುತ್ತವೆ. ಅಪಾರ ಪ್ರಮಾಣದ ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಮೂಲಕ, ಎಐ ಅಲ್ಗಾರಿದಂಗಳು ಮಹತ್ವದ ವಿಚಾರಗಳು, ವಿವರಗಳನ್ನು ಗುರುತಿಸಿ, ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಆಧರಿತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತವೆ. ಈ ಮಾಹಿತಿಗಳನ್ನು ಬಳಸಿಕೊಂಡು, ಹೊಸ ಮಾಹಿತಿ - ಮಾಧ್ಯಮ ಸಿದ್ಧಪಡಿಸುವಿಕೆ (ಕಂಟೆಂಟ್ ಕ್ರಿಯೇಷನ್), ಅವುಗಳ ಪ್ರಸಾರದ ತಂತ್ರಗಳನ್ನು ರೂಪಿಸುವಿಕೆ, ಜಾಹೀರಾತು ಪ್ರಸಾರಗಳನ್ನು ರೂಪಿಸಿ, ಅಂತಿಮವಾಗಿ ಬಳಕೆದಾರರನ್ನು ಪರಿಣಾಮಕಾರಿಯಾಗಿ ತಲುಪಿ, ಹೆಚ್ಚಿನ ಆದಾಯ ಸೃಷ್ಟಿಸಲು ಸಾಧ್ಯವಾಗುತ್ತದೆ.


ಸ್ವಯಂಚಾಲಿತ ಅನುವಾದ:
ಭಾಷಾ ಅಡಚಣೆಗಳು ಯಾವಾಗಲೂ ಮಾಧ್ಯಮಗಳ ಮಾಹಿತಿ ಪಡೆದುಕೊಳ್ಳಲು ಸವಾಲಾಗಿದ್ದವು. ಆದರೆ, ಎಐ ಆಧಾರಿತ ಭಾಷಾಂತರ ಉಪಕರಣಗಳು ಈ ಸವಾಲನ್ನು ನಿವಾರಿಸುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ. ಆಧುನಿಕ ಯಾಂತ್ರಿಕ ಅನುವಾದ ಅಲ್ಗಾರಿದಂಗಳು ಬರಹ, ಧ್ವನಿ, ಹಾಗೂ ವೀಡಿಯೋಗಳನ್ನು ನೈಜ ಸಮಯದಲ್ಲಿ ಭಾಷಾಂತರಗೊಳಿಸಬಲ್ಲವು. ಆ ಮೂಲಕ ಮಾಧ್ಯಮ ಸಂಸ್ಥೆಗಳು ಜಾಗತಿಕ ಬಳಕೆದಾರರನ್ನು ತಲುಪಲು ಸಾಧ್ಯವಾಗುತ್ತದೆ. ಈ ಉಪಕರಣಗಳು ವಿವಿಧ ಸಂಸ್ಕೃತಿಗಳ ನಡುವಿನ ಸಂವಹನಕ್ಕೆ ಅನುವು ಮಾಡಿಕೊಟ್ಟು, ಮಾಹಿತಿಗಳು ವಿಶಾಲ ಬಳಕೆದಾರರನ್ನು ತಲುಪಲು ನೆರವಾಗುತ್ತವೆ.


ನೈತಿಕ ವಿಚಾರಗಳು:
ಎಐ ಈಗ ಹೆಚ್ಚಾಗಿ ಬಳಕೆಯಾಗುತ್ತಿರುವುದರಿಂದ, ಅದರ ನೈತಿಕ ಆಯಾಮವನ್ನೂ ಗಮನಿಸುವುದು ಅತ್ಯಂತ ಮುಖ್ಯವಾಗಿದೆ. ಮಾಹಿತಿ ಗೌಪ್ಯತೆ, ಅಲ್ಗಾರಿದಂಗಳ ಪಕ್ಷಪಾತ, ಹಾಗೂ ಉದ್ಯೋಗಗಳ ಮೇಲೆ ಎಐ ಬೀರುವ ಪ್ರಭಾವಗಳಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಮಾಧ್ಯಮ ಸಂಸ್ಥೆಗಳು ಎಐ ಬಳಕೆಯನ್ನು ಜಾರಿಗೆ ತರುವಾಗ ಪಾರದರ್ಶಕತೆ, ಜವಾಬ್ದಾರಿ, ಮತ್ತು ನ್ಯಾಯಪರತೆಯನ್ನು ಸಹ ಖಾತ್ರಿಪಡಿಸುವ ಅವಶ್ಯಕತೆಯಿದೆ. ಆ ಮೂಲಕ ಸಂಭಾವ್ಯ ಅಪಾಯಗಳನ್ನು ತಗ್ಗಿಸಿ, ಬಳಕೆದಾರರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯ.


ಒಟ್ಟಾರೆಯಾಗಿ, ಮಾಧ್ಯಮ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇದು ಮಾಹಿತಿ ಸೃಷ್ಟಿ, ವ್ಯಕ್ತಿಗತ ಶಿಫಾರಸುಗಳು, ಡೀಪ್‌ಫೇಕ್ ಪತ್ತೆ, ವಿಶ್ಲೇಷಣೆ, ಅನುವಾದ ಸೇರಿದಂತೆ ಹಲವು ಆಯಾಮಗಳಲ್ಲಿ ನೆರವಾಗುತ್ತದೆ. ಎಐ ತಂತ್ರಜ್ಞಾನದಲ್ಲಿ ಇನ್ನಷ್ಟು ಸುಧಾರಣೆಗಳು ಆಗುವುದರಿಂದ, ಭವಿಷ್ಯದಲ್ಲಿ ಮಾಧ್ಯಮ ವಲಯ ಬಹಳಷ್ಟು ಬದಲಾವಣೆಗಳನ್ನು ಕಾಣಲಿದೆ. ಆದರೆ, ಈ ಅಭಿವೃದ್ಧಿಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವುದು ಅವಶ್ಯಕವಾಗಿದೆ. ಎಐ ಬಳಕೆಯನ್ನು ನ್ಯಾಯಯುತವಾಗಿಸಿ, ಎಲ್ಲರ ಮಾಧ್ಯಮ ಬಳಕೆಯ ಅನುಭವವನ್ನು ಉತ್ತಮಗೊಳಿಸಲು ಸಾಧ್ಯವಿದೆ.


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.