ಇಂಡೋನೇಷ್ಯಾ: ಸುನಾಮಿಗೆ ಬಲಿಯಾದವರ ಸಂಖ್ಯೆ 222ಕ್ಕೆ ಏರಿಕೆ
ಜ್ವಾಲಾಮುಖಿ ಸ್ಫೋಟದಿಂದಾಗಿ ಸಂಭವಿಸಿರುವ ಈ ಸುನಾಮಿಯಲ್ಲಿ 222 ಮಂದಿ ಸಾವನ್ನಪ್ಪಿದ್ದು, 843 ಮಂದಿ ಗಾಯಗೊಂಡಿದ್ದಾರೆ.
ಜಕಾರ್ತ: ಇಂಡೋನೇಷ್ಯಾದ ಸುಂದಾನ ಜಲಸಂಧಿಯಲ್ಲಿ ಉಂಟಾಗಿರುವ ಸುನಾಮಿ ದೈತ್ಯ ಅಲೆಗಳ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 222ಕ್ಕೆ ಏರಿದೆ.
ಜ್ವಾಲಾಮುಖಿ ಸ್ಫೋಟದಿಂದಾಗಿ ಜಾವಾ ಮತ್ತು ಸುಮಾತ್ರಾ ದ್ವೀಪಗಳಲ್ಲಿ ಸಂಭವಿಸಿರುವ ಈ ಸುನಾಮಿಯಲ್ಲಿ 222 ಮಂದಿ ಸಾವನ್ನಪ್ಪಿದ್ದು, 843 ಮಂದಿ ಗಾಯಗೊಂಡಿದ್ದಾರೆ. ಹಲವರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
ಸುನಾಮಿ ಅಬ್ಬರಕ್ಕೆ ನೂರಾರು ಮನೆಗಳು ನಾಶವಾಗಿದ್ದು, ಜನರನ್ನು ರಕ್ಷಿಸುವ ಕಾರ್ಯ ಪ್ರಗತಿಯಾಲ್ಲಿದೆ. ಇಂಡೋನೇಷ್ಯಾದ ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿಯ ವಿಜ್ಞಾನಿಗಳು, ಅನಕ್ ಕ್ರಕಟಾಯು ಪರ್ವತದಲ್ಲಿನ ಅಗ್ನಿಪರ್ವತದ ಕ್ರಿಯೆಗಳಿಂದಾಗಿ ಸಮುದ್ರದಾಳದಲ್ಲಿ ಭೂಕುಸಿತ ಉಂಟಾಗಿದ್ದು ಮತ್ತು ಹುಣ್ಣಿಮೆಯ ಅವಧಿಯಲ್ಲಿನ ಅಲೆಗಳ ಉಬ್ಬರ ಅಸಹಜವಾಗಿ ಹೆಚ್ಚಾಗಿದ್ದು ಸುನಾಮಿಗೆ ಕಾರಣ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ಸುಪೊಟೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.
ಟಿಕು ಪ್ರದೇಶದಿಂದ 23 ಕಿ.ಮೀ. ದೂರದಲ್ಲಿ ಭೂಕಂಪ ಉಂಟಾಗಿದ್ದು, ಜನರಲ್ಲಿ ಇನ್ನಷ್ಟು ಭಯ ಮೂಡಿಸಿದೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿನಾಶದ ಸುನಾಮಿ ಹೇಗೆ ಉಂಟಾಯಿತು ಎಂಬ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಪಾಪ್ ಬ್ಯಾಂಡ್'ನ ನೇರಪ್ರಸಾರದ ವೇಳೆ ಹಠಾತ್ ಆಗಿ 'ಸುನಾಮಿ' ಅಪ್ಪಳಿಸಿರುವ ದೃಶ್ಯ ಸೆರೆಯಾಗಿದೆ.