ಇಸ್ಲಾಮಿಕ್ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಕಾರ್ಯಾಚರಣೆ; ಓರ್ವ ಸಾವು, 130 ಮಂದಿಗೆ ಗಾಯ
ಇಸ್ಲಾಮಾಬಾದ್: ರಾಜಧಾನಿ ಇಸ್ಲಾಮಾಬಾದ್ ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರತಿಭಟನೆಗಾಗಿ ಬಳಸಿಕೊಳ್ಳುತ್ತಿದ್ದ ಮೂಲಭೂತವಾದಿಗಳನ್ನು ಹತ್ತಿಕ್ಕಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ನಡೆಸುತ್ತಿರುವ ಭಾರೀ ಕಾರ್ಯಾಚರಣೆಯಲ್ಲಿ ಓರ್ವ ಸಾವನ್ನಪ್ಪಿದ್ದು, 130ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಹಾಗೂ ಅರೆಸೇನಾ ಪಡೆಗಳು ಮತ್ತು ಇಸ್ಲಾಮಿಸ್ಟ್ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖಾಸಗಿ ವಾಹಿನಿಗಳ ಪ್ರಸಾರವನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ.
ಸಂಘರ್ಷದ ಮತ್ತು ಸುರಕ್ಷತಾ ಕಾರ್ಯಾಚರಣೆಯ ನೇರ ಪ್ರಸಾರ ಮಾಡುವ ಮೂಲಕ ಪ್ರಾಧಿಕಾರದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳ ಪ್ರಸಾರವನ್ನು ತಡೆಹಿಡಿಯಲಾಗಿದೆ. ಆದರೆ ರಾಜ್ಯ-ನಿರ್ವಹಣೆಯ ಪಾಕಿಸ್ತಾನ್ ಟೆಲಿವಿಷನ್ ರಾಜಕೀಯ ವಿಷಯಗಳ ಕುರಿತ ಟಾಕ್ ಶೋ ಪ್ರಸಾರ ಮಾಡುವ ಮೂಲಕ ತನ್ನ ಪ್ರಸಾರವನ್ನು ಮುಂದುವರಿಸಿದೆ.
ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಇಸ್ಲಾಮಿಕ್ ಮೂಲಭೂತವಾದಿಗಳು ಪ್ರಮುಖ ರಸ್ತೆಗಳಲ್ಲಿ ಸಂಚಾರ ತಡೆದಿದ್ದರು. ಅದನ್ನು ತೆರವುಗೊಳಿಸಲು ಪೊಲೀಸರು ಕಾರ್ಯಾಚರನೆ ನಡೆಸಿದರು.ಪ್ರತಿಭಟನೆ ನಿರತ ಇಸ್ಲಾಮಿಕ್ ಕಾರ್ಯಕರ್ತರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ರಬ್ಬರ್ ಗುಂಡುಗಳನ್ನು ಬಳಸಿ ಪ್ರತಿಭಟನೆಕಾರರನ್ನು ಚದುರಿಸಲು ಯತ್ನಿಸಿದ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭದ್ರತಾ ಅಧಿಕಾರಿಗಳ ಪ್ರಕಾರ, 2,000 ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 8,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭಾಗವಹಿಸಿದ್ದು, ಪ್ರತಿಭಟನಾಕಾರರಿಂದ ಪೊಲೀಸರು ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.