124 ದೇಶಗಳ ಕಲಾವಿದರಿಂದ ಮಹಾತ್ಮ ಗಾಂಧಿಗೆ ನಮನ
ಗಾಂಧೀಜಿಯವರ ನೆಚ್ಚಿನ ಭಜನೆ `ವೈಷ್ಣವ ಜನ ತೋ` ಅನ್ನು 124ಕ್ಕೂ ಅಧಿಕ ರಾಷ್ಟ್ರಗಳ ಸಂಗೀತಗಾರರು ಹಾಡುವ ಮೂಲಕ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ಭಜನೆಗಳಲ್ಲಿ ಒಂದಾಗಿರುವ 'ವೈಷ್ಣವ ಜನ ತೋ' ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ಸ್ವರೂಪದಲ್ಲಿ ಮೂಡಿಬಂದಿರುವ 'ವೈಷ್ಣವ ಜನ ತೋ' ಭಜನೆಯನ್ನು ಬಿಡುಗಡೆ ಮಾಡಿದರು.
ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಸ್ಯಾನಿಟೇಷನ್ ಕಾನ್ಫರೆನ್ಸ್‌ನ ಸಮಾರೋಪ ಸಮಾರಂಭದಲ್ಲಿ ಮೋದಿ ಅವರು ಈ ಗೀತೆಯನ್ನು ಬಿಡುಗಡೆ ಮಾಡಿದರು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ ಅಂಗವಾಗಿ ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ಹೈಕಮಿಷನ್ ಕಛೇರಿಗಳು ಸಂಗೀತ ತಂಡಗಳನ್ನು ರಚಿಸಿ ಗಾಂಧಿ ಜಯಂತಿಗೂ ಮುನ್ನ ಈ ಭಜನೆಯನ್ನು ರೆಕಾರ್ಡ್ ಮಾಡಿವೆ. ಈ ವೈವಿಧ್ಯಮಯ ವಿಡಿಯೋಗೆ ವಿಶ್ವ ಸಂಸ್ಥೆಯಿಂದ ಗುರುತಿಸಲ್ಪಟ್ಟ ಎಲ್ಲಾ ದೇಶಗೂ ತಮ್ಮ ಕೊಡುಗೆ ನೀಡಿವೆ. 15ನೇ ಶತಮಾನದಲ್ಲಿ ಗುಜರಾತಿಯಲ್ಲಿ ಈ ಕವಿತೆಯನ್ನು ನರಸಿಂಹ ಮೆಹ್ತಾ ಎನ್ನುವವರು ರಚಿಸಿದರು.