VIDEO: ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕ ನವಜಾತ ಶಿಶುವಿಗೆ `ಇಂಡಿಯಾ` ಎಂದು ಹೆಸರಿಟ್ಟ ಅಮೇರಿಕಾ ಪೊಲೀಸ್
ಯುಎಸ್ನ ಜಾರ್ಜಿಯಾ ಪ್ರಾಂತ್ಯದ ಪೊಲೀಸರಿಗೆ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶುವೊಂದು ದೊರೆತಿದ್ದು, ಆ ಮಗುವಿಗೆ `ಇಂಡಿಯಾ` ಎಂದು ಹೆಸರಿಟ್ಟಿದ್ದಾರೆ.
ವಾಷಿಂಗ್ಟನ್: ಯುಎಸ್ನ ಜಾರ್ಜಿಯಾ ಪ್ರಾಂತ್ಯದ ಪೊಲೀಸರಿಗೆ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶುವೊಂದು ದೊರೆತಿದ್ದು, ಆ ಮಗುವಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾರೆ. ಪ್ಲಾಸಿಕ್ ಚೀಲದಲ್ಲಿ ದೊರೆತಿರುವ ಶಿಶು ಹೆಣ್ಣು ಮಗುವಾಗಿದ್ದು, ಪೊಲೀಸರು ತಾಯಿಯ ಹುಡುಕಾಟಕ್ಕೆ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಮ್ಮಿಂಗ್ ನಗರ ಪೊಲೀಸ್ ಇಲಾಖೆ ಜೂನ್ 25ರಂದು ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಸಹಾಯಕ್ಕಾಗಿ ಜನರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ಒದಗಿಸುವವರಿಗಾಗಿ ಫೋನ್ ಸಂಖ್ಯೆ ನೀಡಲಾಗಿದ್ದು, ಮಾಹಿತಿ ಒದಗಿಸುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಲಾಗಿದೆ.
ಜೂನ್ 6 ರ ರಾತ್ರಿ ಸುಮಾರು 10 ಗಂಟೆಗೆ, ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬ ವ್ಯಕ್ತಿ ನಿರ್ಜನ ಪ್ರದೇಶದಲ್ಲಿ ಮಗು ಅಳುತ್ತಿದ್ದ ಧ್ವನಿಯನ್ನು ಕೇಳಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ಲಾಸ್ಟಿಕ್ ಚೀಲದಲ್ಲಿ ಹೆಣ್ಣು ಮಗುವೊಂದು ದೊರೆತಿರುವ ದೃಶ್ಯದ ಸಂಪೂರ್ಣ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ನಿರ್ಜನ ಪ್ರದೇಶದಲ್ಲಿ ಸಿಕ್ಕ ಮಗುವಿನ ಕುಟುಂಬವನ್ನು ಪತ್ತೆ ಹಚ್ಚಲು ಪೊಲೀಸರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಯಾವುದೇ ಸುಳಿವು ಸಿಗದ ಕಾರಣ ಈ ವೀಡಿಯೊವನ್ನು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು ಸಾರ್ವಜನಿಕರ ಸಹಾಯ ಕೋರಲಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ಈ ಬಾಡಿ ಕ್ಯಾಮ್ ಫೂಟೇಜ್ ಅನ್ನು ಬಿಡುಗಡೆ ಮಾಡಲಾಗಿರುವುದರಿಂದ ವಿಶ್ವಾಸಾರ್ಹ ಮಾಹಿತಿ ಸಿಗಬಹುದು" ಎಂಬುದು ಸ್ಥಳೀಯ ಪೊಲೀಸರ ನಂಬಿಕೆಯಾಗಿದೆ.