ಶಾಂಘೈ: ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿನ ರಾಸಾಯನಿಕ ಕೈಗಾರಿಕಾ ಪಾರ್ಕ್ ನಲ್ಲಿದ್ದ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 47 ಮಂದಿ ಸಾವನ್ನಪ್ಪಿದ್ದು, 600 ಅಧಿಕ ಮಂದಿ ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಗುರುವಾರ ಮುಂಜಾನೆ ಈ ಅವಘದ ಸಂಭವಿಸಿದ್ದು, ನಿರಂತರ ಕಾರ್ಯಾಚರಣೆ ಬಳಿಕ ಶುಕ್ರವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸರ್ಕಾರಿ ವಾಹಿನಿಯೊಂದು ವರದಿ ಮಾಡಿದೆ. 


ಗಾಯಾಳುಗಳನ್ನು 16 ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದ್ದು, 600ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 32 ಮಂದಿ ಸ್ಥಿತಿ ಗಂಭೀರವಾಗಿದ್ದು, 58 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, 3000ಕ್ಕೂ ಅಧಿಕ ಕಾರ್ಮಿಕರನ್ನು ಹಾಗೂ 1000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. 


ತಿಯಂಜಾಯಿ ಕೆಮಿಕಲ್ ಕಂಪನಿ ಮಾಲಿಕತ್ವದ ಈ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಬೆಂಕಿಯ ಜ್ವಾಲೆ ಸನಿಹದ ಇತರ ಕಾರ್ಖಾನೆಗಳಿಗೂ ತಗುಲಿ ಭಾರಿ ಅನಾಹುತ ಸಂಭವಿಸಿದೆ. ಸ್ಫೋಟದಿಂದಾಗಿ ಹತ್ತಿರದಲ್ಲೇ ಇದ್ದ ನರ್ಸರಿ ಶಾಲೆಯ ಮಕ್ಕಳೂ ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ. 


ಸದ್ಯ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಈ ಕಂಪನಿಯು 30ಕ್ಕೂ ಹೆಚ್ಚು ಆರ್ಗ್ಯಾನಿಕ್ ರಾಸಾಯನಿಕಗಳನ್ನು ಉತ್ಪಾದಿಸುತ್ತಿದ್ದು, ಅವಗಳಲ್ಲಿ ಕೆಲವು ಹೆಚ್ಚು ಸ್ಫೋಟಕಾರಕವಾಗಿವೆ ಎಂದು ತಿಳಿದುಬಂದಿದೆ. ಈ ಹಿಂದೆ ಕಾರ್ಖಾನೆಯಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿತ್ತು ಎಂದು ಚೀನಾ ಡೈಲಿ ವರದಿ ಮಾಡಿದೆ.