ಬ್ರಿಟನ್: ಸಾರ್ವತ್ರಿಕ ಚುನಾವಣೆಯಲ್ಲಿ ಕಾನ್ಸರ್ವೆಟಿವ್ ಪಕ್ಷಕ್ಕೆ ಭಾರಿ ಜನಾದೇಶ
ಆರಂಭಿಕ ಟ್ರೆಂಡ್ ಗಳಿಗೆ ಸಂತಸ ವ್ಯಕ್ತಪಡಿಸಿದ್ದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, `ಬ್ರಿಟನ್ ನಲ್ಲಿ ಬೋರಿಸ್ ಅವರ ಪಾಲಿಗೆ ದೊಡ್ಡ ಗೆಲುವು ಕಂಡುಬರುತ್ತಿದೆ` ಎಂದು ಟ್ವೀಟ್ ಮಾಡಿದ್ದರು.
ಲಂಡನ್: ಬ್ರಿಟನ್ ನಲ್ಲಿ ಆಡಳಿತಾರೂಢ ಕಾನ್ಸರ್ವೇಟಿವ್ ಪಕ್ಷ ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದಾಖಲಿಸಿದೆ. ಒಂದೆಡೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಈ ಚುನಾವಣೆಯಲ್ಲಿ ಭಾರಿ ಜನಾದೇಶ ದೊರೆತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷದ ಪಾಲಿಗೆ 1935ರ ಬಳಿಕ ಸಿಕ್ಕ ಅತ್ಯಂತ ಹೀನಾಯ ಫಲಿತಾಂಶ ಇದಾಗಿದೆ. ಸುದ್ದಿ ಸಂಸ್ಥೆ ಎಫೆ ಪ್ರಕಾರ ಕಾನ್ಸರ್ವೇಟಿವ್ ಪಕ್ಷ ಬ್ರಿಟನ್ ನ ಹೌಸ್ ಆಫ್ ಕಾಮನ್ಸ್ ನಲ್ಲಿ ಒಟ್ಟು 334 ಸ್ಥಾನಗಳನ್ನು ಗೆದ್ದು, 74 ಸ್ಥಾನಗಳಲ್ಲಿ (45 ಸ್ಥಾನಗಳ ಲಾಭ) ಬಹುಮತ ಸಾಧಿಸಿದೆ. ಇದರಿಂದ ದಕ್ಷಿಣಪರ ಪಕ್ಷವಾಗಿರುವ ಲೇಬರ್ ಪಕ್ಷದ ಅಭ್ಯರ್ಥಿಗಳಿಗೆ ಅವರ ಪಾರಂಪರಿಕ ಭದ್ರಕೋಟೆಯಲ್ಲಿಯೇ ಭಾರಿ ಹಿನ್ನಡೆಯಾಗಿದೆ.
ಆಕ್ಸ್ ಬ್ರಿಜ್ ಹಾಗೂ ಸೌತ್ ರಾಯಿಸ್ಲಿಪ್ ನಲ್ಲಿ ಸುಲಭವಾಗಿ ಗೆಲುವಿನ ಬಳಿಕ ಫಲಿತಾಂಶಗಳು ಕುರಿತು ಹರ್ಷ ವ್ಯಕ್ತಪಡಿಸಿದ್ದ ಜಾನ್ಸನ್, "ಕಾನ್ಸರ್ವೇಟಿವ್ ಸರ್ಕಾರಕ್ಕೆ ಬ್ರೆಕ್ಸಿಟ್ ಜಾರಿಗೊಳಿಸಲು ಸಿಕ್ಕ ಭಾರಿ ಜನಾದೇಶ ಇದಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
" ಬ್ರಿಟೀಷ್ ನಾಗರಿಕರ ಪ್ರಜಾಪ್ರಭುತ್ವದ ಇಚ್ಛೆಯನ್ನು ಗೌರವಿಸಲು, ಈ ದೇಶವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಹಾಗೂ ಈ ದೇಶದ ಪ್ರತಿಯೊಬ್ಬ ನಾಗರಿಕರ ಕ್ಷಮತೆಯನ್ನು ಹೈಲೈಟ್ ಮಾಡಲು ಇದು ಅವಕಾಶ ಮಾಡಿಕೊಟ್ಟಿದೆ" ಎಂದು ಬ್ರಿಟೀಷ್ ಪ್ರಧಾನಿ ಹೇಳಿದ್ದಾರೆ.
ಇನ್ನೊಂದೆಡೆ ಫಲಿತಾಂಶದಿಂದ ನಿರಾಶೆಗೊಂಡ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ "ಇನ್ಮುಂದೆ ಭವಿಷ್ಯದಲ್ಲಿ ತಾವು ಎಂದಿಗೂ ಕೂಡ ಸಾರ್ವತ್ರಿಕ ಚುನಾವಣೆಗಳಲ್ಲಿ ಲೇಬರ್ ಪಕ್ಷದ ನೇತೃತ್ವ ವಹಿಸುವುದಿಲ್ಲ" ಎಂದು ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕೆ ಕೇವಲ 201 ಸ್ಥಾನ (57 ಸ್ಥಾನಗಳ ನಷ್ಟ)ಗಳು ಲಭಿಸಿವೆ. ಇದಕ್ಕೂ ಮೊದಲು 1935ರಲ್ಲಿ ಪಕ್ಷ ಅತ್ಯಂತ ಹೀನಾಯ ಪ್ರದರ್ಶನ ನೀಡಿ ಕೇವಲ 154 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 1983ರಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದ ಪಕ್ಷ 209 ಸ್ಥಾನಗಳನ್ನು ಮಾತ್ರವೇ ಗೆಲ್ಲಲು ಶಕ್ತವಾಗಿತ್ತು.
ಇಜಲಿಂಗ್ಟನ್ ನಾರ್ಥ್ ಮತ ಎಣಿಕೆ ಕೇಂದ್ರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಬಿನ್ "ಪಕ್ಷದ ಪಾಲಿಗೆ ಈ ರಾತ್ರಿ ಸ್ಪಷ್ಟವಾಗಿ ನಿರಾಶೆಯ ಸಂದೇಶ ತಂದಿದೆ" ಎಂದಿದ್ದಾರೆ.
ಏತನ್ಮಧ್ಯೆ, ಲಿಬರಲ್ ಡೆಮೋಕ್ರಾಟ್ಸ್ ಮುಖಂಡ ಜೋ. ಸ್ವಿನ್ಸನ್, ಡ್ಯಾನ್ಬರ್ಟನ್ ಶಾಯಿರ್ ಸ್ಥಾನವನ್ನು ಸ್ಕಾಟಿಷ್ ನ್ಯಾಷನಲ್ ಪಾರ್ಟಿ ಕೈಯಿಂದ ಕಳೆದುಕೊಂಡಿದ್ದಾರೆ. ಕಳೆದ 12 ವರ್ಷಕ್ಕಿಂತಲೂ ಅಧಿಕ ಸಮಯದವರೆಗೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಇದಕ್ಕೂ ಮೊದಲು ಆರಂಭಿಕ ಟ್ರೆಂಡ್ ಗಳಿಗೆ ಸಂತಸ ವ್ಯಕ್ತಪಡಿಸಿದ್ದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಬ್ರಿಟನ್ ನಲ್ಲಿ ಬೋರಿಸ್ ಅವರ ಪಾಲಿಗೆ ದೊಡ್ಡ ಗೆಲುವು ಕಂಡುಬರುತ್ತಿದೆ" ಎಂದು ಟ್ವೀಟ್ ಮಾಡಿದ್ದರು.