ಬ್ರಿಟಿಷ್ ಏರ್‌ವೇಸ್ ವಿಮಾನದಿಂದ ಈ ಭಾರತೀಯ ಕುಟುಂಬವನ್ನು ಕೆಳಗಿಳಿಸಿದ್ದು ಏಕೆ ಗೊತ್ತಾ?
ಲಂಡನ್-ಬೆರ್ಲಿನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಅಧಿಕಾರಿಯ ಕುಟುಂಬವನ್ನೇ ವಿಮಾನದಿಂದ ಕೆಳಗಿಳಿಸಿದ ಬ್ರಿಟಿಷ್ ಏರ್‌ವೇಸ್ ವಿಮಾನ.
ನವದೆಹಲಿ: ಮೂರು ವರ್ಷದ ಮಗು ಅಳುತ್ತಿದ್ದ ಕಾರಣಕ್ಕೆ ಲಂಡನ್-ಬೆರ್ಲಿನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಅಧಿಕಾರಿಯ ಕುಟುಂಬವನ್ನೇ ವಿಮಾನದಿಂದ ಕೆಳಗಿಳಿಸಿದ ಅಮಾನವೀಯ ಘಟನೆ ಲಂಡನ್ ನಲ್ಲಿ ನಡೆದಿದೆ.
ಲಂಡನ್-ಬೆರ್ಲಿನ್ ವಿಮಾನದಲ್ಲಿ ಭಾರತೀಯ ಇಂಜಿನಿಯರಿಂಗ್ ಸೇವೆಯಲ್ಲಿರುವ ಅಧಿಕಾರಿಯು ಪತ್ನಿ ಹಾಗೂ ತನ್ನ ಮೂರು ವರ್ಷದ ಮಗುವಿನೊಂದಿಗೆ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕಾಫ್ ಆಗುವ ವೇಳೆ ಗಾಬರಿಗೊಂಡ ಮೂರು ವರ್ಷದ ಮಗು ಅಳಲಾರಂಭಿಸಿದೆ. ಇದರಿಂದ ಕಿರಿಕಿರಿಗೊಂಡ ವಿಮಾನ ಸಿಬ್ಬಂದಿ ವಿಮಾನವನ್ನು ತಕ್ಷನ ಟರ್ಮಿನಲ್ ಗೆ ತಂದು ಈ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದೆ.
ಸಾರಿಗೆ ಸಚಿವಾಲಯದಲ್ಲಿ ಭಾರತೀಯ ಇಂಜಿನಿಯರಿಂಗ್ ಸೇವೆಯಲ್ಲಿರುವ ಅಧಿಕಾರಿಯು ತಮ್ಮ ವಿರುದ್ಧ ಬ್ರಿಟಿಷ್ ಏರ್‌ವೇಸ್ ನ ಲಂಡನ್-ಬರ್ಲಿನ್ ವಿಮಾನ (BA 8495)ದಲ್ಲಿ ಜುಲೈ 23 ರಂದು "ಅವಮಾನ ಮತ್ತು ವರ್ಣಬೇಧ ನಡತೆ" ಅನುಸರಿಸಿದೆ ಎಂದು ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಲಂಡನ್ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಗಾಬರಿಗೊಂಡ 3 ವರ್ಷದ ಮಗು ಅಳಲಾರಂಭಿಸಿತು. ನನ್ನ ಪತ್ನಿ ಮಗುವನ್ನು ಸಂತೈಸಲು ಪ್ರಯತ್ನಿಸಿದರೂ ಅದು ಸುಮ್ಮನಾಗಿಲ್ಲ. ಆಗ ವಿಮಾನದ ಗಗನಸಖಿಯರು ಮಗುವನ್ನು ಸುಮ್ಮನಾಗುವಂತೆ ಹೆದರಿಸಿದ್ದರಿಂದ ಮಗು ಇನ್ನೂ ಜೋರಾಗಿ ಅಳತೊಡಗಿದೆ. ಟರ್ಮಿನಲ್ಗೆ ವಾಪಾಸು ಬಂದು ಲ್ಯಾಂಡ್ ಆದ ವಿಮಾನದೊಳಗೆ ಧಾವಿಸಿದ ಅಧಿಕಾರಿಗಳು ಗಲಾಟೆ ಮಾಡಿ ನಿಂದಿಸಿ ತಮ್ಮನ್ನು ವಿಮಾನದಿಂದ ಕೆಳಗಿಳಿಸಿದರು ಎಂದು ಆ ಮಗುವಿನ ಅಪ್ಪ, ಸಚಿವ ಸುರೇಶ್ ಪ್ರಭುಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ವಿಮಾನಯಾನ ಸಂಸ್ಥೆಯ ವಕ್ತಾರರು, ಇಂಥಹ ದೂರನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಯಾವುದೇ ಬಗೆಯ ತಾರತಮ್ಯವನ್ನು ನಾವು ಸಹಿಸುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದು, ಗ್ರಾಹಕರ ಜತೆ ನೇರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.