ಪಾಕ್ ನಡೆಯನ್ನು ಸ್ವಾಗತಿಸಿದ ಚೀನಾ
ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶಾಂತಿಯ ಪ್ರತೀಕವಾಗಿ ಬಿಡುಗಡೆಗೊಳಿಸಿರುವ ಪಾಕ್ ನಡೆಯನ್ನು ಚೀನಾ ಸ್ವಾಗತಿಸಿದೆ.
ನವದೆಹಲಿ: ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶಾಂತಿಯ ಪ್ರತೀಕವಾಗಿ ಬಿಡುಗಡೆಗೊಳಿಸಿರುವ ಪಾಕ್ ನಡೆಯನ್ನು ಚೀನಾ ಸ್ವಾಗತಿಸಿದೆ.
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಮಾತನಾಡುತ್ತಾ ಎರಡೂ ದೇಶಗಳು ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಮಾತುಕತೆಗೆ ಮುಂದಾಗಬೇಕೆಂದು ತಿಳಿಸಿದರು. ಪುಲ್ವಾಮಾ ಉಗ್ರರ ದಾಳಿಯಲ್ಲಿ ಇತ್ತೀಚಿಗೆ 40 ಭಾರತೀಯರು ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಹದಗೆಟ್ಟಿತ್ತು, ಇದಾದ ಬೆನ್ನಲ್ಲಿ ಭಾರತ ಪ್ರತಿಕಾರ ತೀರಿಸಿಕೊಳ್ಳಲು ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದಾದ ನಂತರ ಇಮ್ರಾನ್ ಖಾನ್ ಶಾಂತಿ ಪ್ರತೀಕವಾಗಿ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದರು.
ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕ್ ನಡುವೆ ಹೆಚ್ಚಿತ್ತಿರುವ ಕಂದರ ನಿಜಕ್ಕೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹೆಚ್ಚುವಂತೆ ಮಾಡಿತ್ತು, ಇದಕ್ಕಾಗಿ ಹಲವು ದೇಶಗಳು ಶಾಂತಿ ಮಾತುಕತೆಗೆ ಮುಂದಾಗಿ ಎಂದು ತಾಕೀತು ಮಾಡಿದ್ದವು.ಇನ್ನೊಂದೆಡೆಗೆ ಪಾಕ್ ಪರವಾದ ನಿಲುವು ಹೊಂದಿರುವ ಚೀನಾ ಕೂಡ ಉಭಯದೇಶಗಳ ನಡುವೆ ನಡೆದಿರುವ ಸಮರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಈಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿಲುವಿಗೆ ಚೀನಾ ಮೆಚ್ಚುಗೆ ವ್ಯಕ್ತಪಡಿಸಿದೆ.