ಪ್ರಾರ್ಥನೆ ಮುಗಿಸಿ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ; ಈದ್ ದಿನದಂದು ಪಾಕ್ನಲ್ಲಿ ರಕ್ತಪಾತ
ಎರಡು ಗುಂಪುಗಳ ನಡುವಿನ ಹಳೆಯ ದ್ವೇಷವೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಇಸ್ಲಾಮಾಬಾದ್: ಬುಧವಾರ ಪಾಕಿಸ್ತಾನದ ಮುಲ್ತಾನ್ ಜಿಲ್ಲೆಯ ಎರಡು ಬಣಗಳ ನಡುವಿನ ಘರ್ಷಣೆಯಿಂದಾಗಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.
ಸುದ್ದಿ ಸಂಸ್ಥೆ ಕ್ಸಿನ್ಹುಆ ಪ್ರಕಾರ, ಈದ್ ಪ್ರಾರ್ಥನೆಯ ನಂತರ ಮಸೀದಿಯಿಂದ ಹೊರಬರುತ್ತಿದ್ದ ಜನರ ಮೇಲೆ ವಿರೋಧಿ ಗುಂಪೊಂದು ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ಇದರ ನಂತರ, ಎರಡೂ ಬದಿಯಿಂದ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ನಾಲ್ವರು ಮೃತಪಟ್ಟರು. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗಿದೆ.
ಎರಡು ಗುಂಪುಗಳ ನಡುವಿನ ಹಳೆಯ ದ್ವೇಷವೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.