ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತಿದ್ದ ಆರ್ಟಿಕಲ್ 370 ನ್ನು ತೆಗೆದುಹಾಕಿದಾಗಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ಪ್ರತಿ ಹಂತದಲ್ಲೂ ಭಾರತದ ವಿರುದ್ಧ ಮಾತನಾಡಲು ಪಾಕಿಸ್ತಾನ ತನ್ನ ಪ್ರಯತ್ನವನ್ನು ಮುಂದುವರೆಸಿದೆ. ಆದರೆ ಎಲ್ಲೆಡೆ ಪರಾಭವಗೊಳ್ಳುತ್ತಿದ್ದರೂ ಇದೀಗ ಮತ್ತೊಮ್ಮೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ, ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಸೇರಿದಂತೆ ಭಾರತದ ನಿಯೋಗ ಸೂಕ್ತ ಪ್ರತಿಕ್ರಿಯೆ ನೀಡಿದೆ.


COMMERCIAL BREAK
SCROLL TO CONTINUE READING

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಯುನಿಸೆಫ್ ದಕ್ಷಿಣ ಏಷ್ಯಾದ ಸಂಸದೀಯ ಸಮ್ಮೇಳನದಲ್ಲಿ ಮಕ್ಕಳ ಹಕ್ಕುಗಳ ವಿಷಯವಾಗಿ ಚರ್ಚೆ ನಡೆಯುತ್ತಿತ್ತು. ಈ ಸಮ್ಮೇಳನದಲ್ಲಿ ಪಾಕಿಸ್ತಾನದ ನಿಯೋಗವು ಕಾಶ್ಮೀರದ ವಿಷಯ ಪ್ರಸ್ತಾಪಿಸುತ್ತಿದ್ದಂತೆ, ತಕ್ಷಣವೇ ಭಾರತೀಯ ನಿಯೋಗವು ಬಲವಾದ ಪ್ರತಿಕ್ರಿಯೆಯನ್ನು ನೀಡಿತು. ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಅವಸ್ಥೆ ಮತ್ತು ಪಾಕಿಸ್ತಾನದಲ್ಲಿ ಧರ್ಮನಿಂದೆಯ ಕಾನೂನು ಮುಂತಾದ ವಿಷಯಗಳ ಬಗ್ಗೆ ದನಿ ಎತ್ತುವ ಮೂಲಕ ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಈ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. 


ವಾಸ್ತವವಾಗಿ, ವೇದಿಕೆಯಲ್ಲಿ ಕಾರ್ಯಸೂಚಿಯ ಬಗ್ಗೆ ಮಾತನಾಡುವ ಬದಲು, ಪಿಎಂಎಲ್-ಎನ್ ನಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಮೆಹ್ನಾಜ್ ಅಕ್ಬರ್ ಅಜೀಜ್ ಅವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು. ಕಾಶ್ಮೀರದಲ್ಲಿ ಕರ್ಫ್ಯೂ ಕಾರಣ, ಕಳೆದ ಒಂದು ತಿಂಗಳಿನಿಂದ ಮಕ್ಕಳಲ್ಲಿ ಭಯದ ವಾತಾವರಣವಿದೆ ಎಂದು ಅಜೀಜ್ ಹೇಳಿದ್ದಾರೆ. ಅಲ್ಲಿನ ಮಕ್ಕಳಿಗೆ ಶಾಲೆಗಳನ್ನು ತೆರೆಯಲು ಯುನಿಸೆಫ್ ಮಧ್ಯಪ್ರವೇಶಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.


ಈ ಕುರಿತು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಸೇರಿದಂತೆ ಭಾರತದ ನಿಯೋಗ ಒಕ್ಕೂಟದಿಂದ ಪಾಕಿಸ್ತಾನದ ಹಕ್ಕುಗಳಿಗೆ ಬಲವಾಗಿ ಪ್ರತಿಕ್ರಿಯಿಸಿತು. ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ ಗೌರವ್ ಗೊಗೊಯ್, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ಸಮಸ್ಯೆಯಾಗಿದ್ದು, ಪಾಕಿಸ್ತಾನ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಪಾಕಿಸ್ತಾನವು ಮೊದಲು ಮಾನವ ಹಕ್ಕುಗಳ ದುಃಸ್ಥಿತಿಯನ್ನು ನಿಭಾಯಿಸಬೇಕು ಎಂದರು.


ಭಾರತದಲ್ಲಿ ಪ್ರಜಾಪ್ರಭುತ್ವವು ಜೀವಂತವಾಗಿದೆ ಎಂದು ತಮ್ಮ ಮಾತನ್ನು ಮುಂದುವರೆಸಿದ ಅವರು, ನಾವು ನಮ್ಮ ಆಂತರಿಕ ವಿಷಯದಲ್ಲಿ ಇತರರ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕರಿಸಬೇಕು ಮತ್ತು ಧರ್ಮನಿಂದೆಯ ಕಾನೂನುಗಳನ್ನು ಎದುರಿಸಬೇಕು. ಭಾರತ ತನ್ನ ಜನರು ಮತ್ತು ವಿರೋಧವನ್ನು ಕೇಳುತ್ತದೆ ಹೊರತು ಹೊರಗಿನವರದ್ದಲ್ಲ ಎಂದು ಖಡಕ್ ಉತ್ತರ ನೀಡಿದರು.