ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಗೆ 2019 ರ ನೊಬೆಲ್ ಶಾಂತಿ ಪುರಸ್ಕಾರ
ಎರಿಟ್ರಿಯದೊಂದಿಗಿನ ಶಾಂತಿ ಸ್ಥಾಪನೆಗಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು 2019 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನವದೆಹಲಿ: ಎರಿಟ್ರಿಯದೊಂದಿಗಿನ ಶಾಂತಿ ಸ್ಥಾಪನೆಗಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು 2019 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
1998 ರಿಂದ 2000 ರವರೆಗೆ ಗಡಿ ಯುದ್ಧವನ್ನು ನಡೆಸಿದ ಇಥಿಯೋಪಿಯಾ ಮತ್ತು ಎರಿಟ್ರಿಯಾ ಹಲವು ವರ್ಷಗಳ ಹಗೆತನದ ನಂತರ ಜುಲೈ 2018 ರಲ್ಲಿ ಸಂಬಂಧವನ್ನು ಪುನಃಸ್ಥಾಪಿಸಿದ್ದವು. ಈ ಹಿನ್ನಲೆಯಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರಯತ್ನ ಪಟ್ಟ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರಿಗೆ ಒಂಬತ್ತು ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ಅಥವಾ ಸುಮಾರು 900,000 ಡಾಲರ್ ಮೌಲ್ಯದ ಬಹುಮಾನವನ್ನು ಡಿಸೆಂಬರ್ 10 ರಂದು ಓಸ್ಲೋದಲ್ಲಿ ನೀಡಲಾಗುವುದು.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವ ಐದು ಸದಸ್ಯರ ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ಅಧ್ಯಕ್ಷ ಬೆರಿಟ್ ರೀಸ್-ಆಂಡರ್ಸನ್, 2018 ರಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಪಕ್ಕದ ಎರಿಟ್ರಿಯಾದೊಂದಿಗಿನ ತನ್ನ ದೇಶದ ಸಂಘರ್ಷವನ್ನು ಕೊನೆಗೊಳಿಸುವ ಕ್ರಮಗಳಿಗೆ ಅಹ್ಮದ್ ಅವರನ್ನು ಹೆಸರಿಸಲಾಗಿದೆ ಎಂದು ಹೇಳಿದರು.
ಅಬಿ ಅಹ್ಮದ್ ಅವರು ಎರಿಟ್ರಿಯನ್ ಪ್ರಧಾನಿ ಇಸಾಯಾಸ್ ಅಫ್ವೆರ್ಕಿ ಅವರೊಂದಿಗೆ ಶಾಂತಿ ಮತ್ತು ಸ್ನೇಹಕ್ಕಾಗಿ ಜಂಟಿ ಘೋಷಣೆಗೆ ಸಹಿ ಹಾಕಿದ್ದರು.