ವಾಷಿಂಗ್ಟನ್​: 2020ರಲ್ಲಿ ನಡೆಯಲಿರುವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಹಿಂದೂ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವುದು ಬಹುತೇಕ ಖಚಿತವಾಗಿದೆ. 


COMMERCIAL BREAK
SCROLL TO CONTINUE READING

ಡೆಮಾಕ್ರಟಿಕ್​ ಪಕ್ಷದಿಂದ ಹವಾಯಿಯ ಯುಎಸ್​ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್(37)​ ಅವರು ಡೆಮಾಕ್ರಟಿಕ್​ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರು. ಇದೀಗ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಶುಕ್ರವಾರ ವ್ಯಕ್ತಪಡಿಸಿದ್ದಾರೆ. 


ಕಳೆದ ವರ್ಷವಷ್ಟೇ ವಿಶ್ವ ಹಿಂದೂ ಕಾಂಗ್ರೆಸ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತುಳಸಿ ಗಬ್ಬಾರ್ಡ್​ ಅವರು, ಇದಕ್ಕೂ ಮುನ್ನ ಅಮೇರಿಕಾ ಸಂಸತ್​ಗೆ ಆಯ್ಕೆಯಾಗಿ ಭಾರತೀಯ ಮೂಲದ ಮೊದಲ ಅಮೆರಿಕನ್​ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ, ಹವಾಯಿ ಕ್ಷೇತ್ರದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‍ನಲ್ಲಿ ನಾಲ್ಕು ಬಾರಿ ಡೆಮೊಕ್ರಾಟಿಕ್ ಸಂಸದೆಯಾಗಿರುವ ತುಳಸಿ ಅತ್ಯಂತ ಪ್ರಭಾವಿ ಮಹಿಳಾ ನಾಯಕಿಯಾಗಿ ತುಳಸಿ ಗುರುತಿಸಿಕೊಂಡಿದ್ದಾರೆ. 


ಅಮೇರಿಕಾ ಜನರ ಆರೋಗ್ಯ ಸಮಸ್ಯೆಗಳ ಜತೆಗೆ ಹವಾಮಾನ ಬದಲಾವಣೆ ಮತ್ತು ನ್ಯಾಯಾಂಗದಲ್ಲಿ ಸುಧಾರಣೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದಿರುವ ತುಳಸಿ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಔಪಚಾರಿಕವಾಗಿ ಮತ್ತು ಅಧಿಕೃತವಾಗಿ ಮುಂದಿನವಾರ ಘೋಷಣೆ ಮಾಡುವುದಾಗಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.