ವಾಷಿಂಗ್ಟನ್ನಲ್ಲಿ ಪ್ರವಾಹ; ನದಿಗಳಂತಾದ ರಸ್ತೆ, ವೈಟ್ ಹೌಸ್‌ಗೂ ನುಗ್ಗಿದ ನೀರು
ವಾಷಿಂಗ್ಟನ್ ಡಿಸಿಯಲ್ಲಿ ವರುಣನ ಅಬ್ಬರ, ಜನಜೀವನ ಅಸ್ತವ್ಯಸ್ತವಾಗಿದೆ.
ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ ಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಾಷಿಂಗ್ಟನ್ ಡಿಸಿಯ ವೈಟ್ ಹೌಸ್‌ಗೂ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.
ವಾಷಿಂಗ್ಟನ್ ಡಿಸಿಯಲ್ಲಿ ವರುಣನ ಅಬ್ಬರಕ್ಕೆ ಪ್ರಮುಖ ನಗರಗಳ ರಸ್ತೆಗಳು ಸೋಮವಾರ ನದಿಗಳಂತಾಗಿದ್ದು, ನೂರಾರು ಕಾರುಗಳು ನೀರಿನಲ್ಲಿ ಮುಳುಗಿವೆ. ಇನ್ನು ರಸ್ತೆಗಳಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಂತಿರುವುದರಿಂದ ಜನರು ಜೀವ ಉಳಿಸಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ತ್ವರಿತವಾಗಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಆದರೂ, ಈಗಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿ ಆಗಿದೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಪ್ರವಾಹ ಪರಿಸ್ಥಿತಿಯಿಂದಾಗಿ ಸುರಂಗ ಮಾರ್ಗದ ರೈಲು ಸಂಚಾರವನ್ನು ನಿಷೇಧಿಸಲಾಗಿದೆ. ಸಂಚಾರಕ್ಕೆ ಭಾರಿ ಅಡೆ-ತಡೆ ಉಂಟಾಗಿದ್ದು, ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ತಗ್ಗಿನಲ್ಲಿರುವವರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ವಾಷಿಂಗ್ಟನ್‌ನ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಕೂಡ ನೀರು ನಿಂತಿದ್ದು, ಪ್ರಯಾಣಕ್ಕೆ ತೊಂದರೆ ಉಂಟಾಗಿರುವುದರ ಬಗ್ಗೆ ಪ್ರಯಾಣಿಕರು ತಮ್ಮ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಹವಾಮಾನ ವಿದ್ಯಮಾನಗಳನ್ನು ಎದುರಿಸಲು ಸ್ಥಳೀಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಹಲವರು ದೂರಿದ್ದಾರೆ.
ತುರ್ತು ಸಿಬ್ಬಂದಿಯನ್ನು ಮೆಟ್ರೋ ನಿಲ್ದಾಣಗಳು ಮತ್ತು ನಗರದ ಇತರ ಭಾಗಗಳಿಗೆ ನಿಯೋಜಿಸಲಾಗಿದ್ದು, ಅಲ್ಲಿ ಅವರು ರಕ್ಷಣಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಬೀದಿಗಳಲ್ಲಿ ನೀರು ತುಂಬಿರುವ ಪ್ರದೇಶಗಳಲ್ಲಿ ದೊಡ್ಡ ಪಂಪಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಭಾಗಶಃ ನೀರಿನಲ್ಲಿ ಮುಳುಗಿರುವ ಕಾರುಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮೋಟಾರು ದೋಣಿಗಳು ಮತ್ತು ರಾಫ್ಟ್‌ಗಳನ್ನು ಸಹ ಬಳಸಲಾಗುತ್ತಿದೆ.