ನವದೆಹಲಿ: ಸಂಸ್ಕೃತಿಯ ಹೆಸರಿನಲ್ಲಿ, ಪೂರ್ವ ಏಷ್ಯಾದ ದೇಶದಲ್ಲಿ ಕಾಂಬೋಡಿಯಾ(Cambodia) ಯುವತಿಯರ ಶಾರ್ಟ್ಸ್ ಮತ್ತು  ಸ್ಕರ್ಟ್ ಧರಿಸುವಿಕೆಯ ಮೇಲೆ ನಿಷೇಧ ವಿಧಿಸಲು ಮುಂದಾಗಿದೆ. ಇದೇ ರೀತಿ ಯುವಕರೂ ಕೂಡ ಶರ್ಟ್ ಲೆಸ್ ಆಗಲು ಅನುಮತಿಯನ್ನು ನಿರಾಕರಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮಹಿಳಾ ಮತ್ತು ಪುರುಷರ ಉಡುಪು ಧರಿಸುವಿಕೆಯ ಕುರಿತು ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಲಾಗಿದ್ದು, ಇದನ್ನು ಅನೇಕ ಸಂಸದರು ಬೆಂಬಲಿಸಿದ್ದಾರೆ. ಈ ಪ್ರಸ್ತಾವನೆಗೆ ಒಂದು ವೇಳೆ ಸಂಸತ್ತು ಅಂಗೀಕಾರ ನೀಡಿದರೆ ಶಾರ್ಟ್ಸ್, ಸ್ಕರ್ಟ್ ಅಥವಾ ಪಾರದರ್ಶಕ ಬಟ್ಟೆಗಳನ್ನು ಧರಿಸುವ ಯುವತಿಯರ ವಿರುದ್ಧ ಮತ್ತು ಶರ್ಟ್ ಲೆಸ್ ಆಗುವ ಪುರುಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ಪೊಲೀಸರಿಗೆ ಸಿಗಲಿದೆ.


ಸಮಾಜದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಅಪರಾಧಗಳ ಕಡಿವಾಣಕ್ಕೆ ಇಂತಹ ಕಾನೂನು ಅಗತ್ಯವಾಗಿದೆ ಎಂದು ಈ ಕರಡನ್ನು ಬೆಂಬಲಿಸಿದ ಹಲವರು ಹೇಳಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಪ್ರಸ್ತಾವನೆಗೆ ಒಂದು ವೇಳೆ ಅಲ್ಲಿನ ಸಂಸತ್ತು ಅಂಗೀಕಾರ ನೀಡಿದರೆ,ಮುಂದಿನ ವರ್ಷದ ಆರಂಭದಿಂದ ಅದನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ. ಅ ಬಳಿಕ ಪೊಲೀಸರು ಅಪರಾಧಿಗಳ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳಬಹುದಾಗಿದೆ.


ಈ ಕರಡು ಮಸೂದೆಯನ್ನು ಬೆಂಬಲಿಸಿರುವ ಅಲ್ಲಿನ ಸರ್ಕಾರ, ಇದು ಕಾಂಬೋಡಿಯಾದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಾಪಾಡಲಿದೆ ಎಂದು ಹೇಳಿದೆ. ಆದರೆ, ಇನ್ನೊಂದೆಡೆ ಇದರ ವಿರುದ್ಧದ ಕೂಗುಗಳು ಇದೀಗ ಕೇಳಿಬರಲಾರಂಭಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಬೋಡಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಚಾರಿಟಿಯ ಕಾರ್ಯನಿರ್ವಾಹಕ ನಿರ್ದೇಶಕ ಚಾಕ್ ಸೋಫೆ, "ಕಾಂಬೋಡಿಯನ್ ಸರ್ಕಾರದಲ್ಲಿರುವ ಅನೇಕರು ಮಹಿಳೆಯರ ಉಡುಪು ಹಾಗೂ ಅವರ ಶರೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಟಿಪ್ಪಣಿ ಮಾಡುವಲ್ಲಿ ನಿರತರಾಗಿದ್ದಾರೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಿಗೆ ಅವರು ಮಹಿಳೆಯರ ಉಡುಪುಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಈ ನೂತನ ಕಾನೂನು ಜಾರಿಗೆ ತಂದು ಸರ್ಕಾರ ಮಹಿಳೆಯರ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ. ಸರ್ಕಾರದ ಪ್ರಸ್ತಾವನೆಯನ್ನು ಸಮರ್ಥಿಸಿರುವ ಡ್ರಾಫ್ಟಿಂಗ್ ಪ್ರಕ್ರಿಯೆಯ ನೇತೃತ್ವ ವಹಿಸಿರುವ ಆಂತರಿಕ ಸಚಿವಾಲಯದ ಸಚಿವ ಓಕ್ ಕಿಮಿಲೆಖ್, ದೇಶದ ಸಂಸ್ಕೃತಿ ಮತ್ತು ಪರಂಪರೆ ಕಾಪಾಡಲು ಇಂತಹ ಕಾನೂನು ಅವಶ್ಯಕವಾಗಿದೆ. ಇದೊಂದು ವ್ಯವಸ್ಥೆಯ ಭಾಗವಾಗಿರದೇ, ಪರಂಪರೆ ಹಾಗೂ ರೀತಿ ಮತ್ತು ನೀತಿ ರಕ್ಷಣೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.