VIDEO: ಹೊತ್ತಿ ಉರಿದ ರಷ್ಯಾ ವಿಮಾನ; 41 ಪ್ರಯಾಣಿಕರ ದುರ್ಮರಣ
ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮಾಸ್ಕೋದ ಬುಸಿಸ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೆಂಕಿ ಅವಘಡ ಸಂಭವಿಸಿದೆ.
ಮಾಸ್ಕೋ: ರಷ್ಯಾದ ಏರೋಪ್ಲೇಟ್ ಪ್ಯಾಸೆಂಜರ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 41 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ.
ರಷ್ಯಾ ನಿರ್ಮಿತ 'ಸುಖೋಯ್ ಸೂಪರ್ ಜೆಟ್-100' ವಿಮಾನ ಷೆರೆಮೆತ್ಯೆವೊ ನಿಲ್ದಾಣದಿಂದ ಮುರ್ಮನ್ಸ್ಕ್ ನಗರಕ್ಕೆ ಹೊರಟಿತ್ತು. ಆದರೆ, ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮಾಸ್ಕೋದ ಬುಸಿಸ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೆಂಕಿ ಅವಘಡ ಸಂಭವಿಸಿದೆ.
ವಿಮಾನ ಲ್ಯಾಂಡ್ ಬೆಂಕಿ ಹತ್ತಿಕೊಂಡ ಪರಿಣಾಮ ಕೂಡಲೇ ತುರ್ತು ನಿರ್ಗಮನ ದ್ವಾರದ ಮೂಲಕ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಹೊರಬರುತ್ತಿರುವ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ವಿಮಾನದಲ್ಲಿ ಸುಮಾರು 73 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ತುರ್ತು ನಿರ್ಗಮನದ ಮೂಲಕ 37 ಪ್ರಯಾಣಿಕರು ಹೊರಜಿಗಿದು ಪಾರಾಗಿದ್ದಾರೆ. ಆದರೆ 41 ಮಂದಿ ತಪ್ಪಿಸಿಕೊಳ್ಳಲಾಗದೆ ಬೆಂಕಿಗೆ ಆಹುತಿಯಾದರು ಎಂದು ರಷ್ಯಾದ ತನಿಖಾ ಸಂಸ್ಥೆ ವಕ್ತಾರ ಸ್ವೆಟ್ಲಾನಾ ಪೆಟ್ರೆಂಕೋ ತಿಳಿಸಿದ್ದಾರೆ.
ದುರಂತದ ಸುದ್ದಿ ತಿಳಿದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ಡಿಮಿಟ್ರಿ ಮೆಡ್ವೆಡೇವ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.