ಹೂಸ್ಟನ್: ಬಲೂಚಿಸ್ತಾನದ ಬಳಿಕ, ಇದೀಗ ಪಾಕಿಸ್ತಾನದ ಸಿಂಧಿ ಸಮಾಜವು ತಮ್ಮ ಸ್ವಾತಂತ್ರ್ಯದ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದೆ. ಹೂಸ್ಟನ್‌ನಲ್ಲಿ, ಸಿಂಧಿ ಕಾರ್ಯಕರ್ತ ಜಾಫರ್, ಬಾಂಗ್ಲಾದೇಶದಂತೆಯೇ ಸಿಂಧ್ ಅನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಲು ಭಾರತವು ನಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಸಿಂಧಿ ಕಾರ್ಯಕರ್ತ ಜಾಫರ್, "ಪಾಕಿಸ್ತಾನ ಸೇನೆಯು ಸಿಂಧ್ ಸಮುದಾಯದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮಾಡುತ್ತಿದೆ. ಸಿಂಧಿ ಜನರು ಪಾಕ್ ನಿಂದ ಸ್ವಾತಂತ್ರ್ಯ ಒದಗಿಸುವಂತೆ ಮನವಿ ಮಾಡಲು ಹೂಸ್ಟನ್‌ಗೆ ಬಂದಿದ್ದಾರೆ. ಮೋದಿ ಜಿ ಮತ್ತು ಅಧ್ಯಕ್ಷ ಟ್ರಂಪ್ ನಮ್ಮವರು ಎಂದು ನಾವು ಭಾವಿಸುತ್ತೇವೆ ಹಾಗೆಯೇ ಅವರು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

1971 ರಲ್ಲಿ ಭಾರತವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು  ಬಂಗಾಳದೇಶಕ್ಕೆ ಸಹಾಯ ಮಾಡಿತ್ತು. ಈಗ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ಸಿಂಧ್ ಸಮುದಾಯಕ್ಕೆ ನವದೆಹಲಿ ಸಹಕರಿಸಬೇಕು ಎಂದು ಜಾಫರ್ ಹೇಳಿದರು. 


ಇದೇ ವೇಳೆ, ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜಾಫರ್, ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲು ಇಸ್ಲಾಮಾಬಾದ್ ಇಸ್ಲಾಮಿಕ್ ಆಮೂಲಾಗ್ರೀಕರಣವನ್ನು ಬಳಸುತ್ತಿದೆ. ಪಿಎಂ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.