ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಬಾಲಕಿಯ ಶವ ಪತ್ತೆಯಾಗಿದೆ. ಬಲವಂತದ ಮತಾಂತರದಿಂದಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಮೃತ ಹುಡುಗಿಯ ಹೆಸರು ನಮೃತ ಚಂದಾನಿ ಮತ್ತು ಅವಳು ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿಯಾಗಿದ್ದಳು. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ತಿಳಿಸುವುದು ಕಷ್ಟ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದು ಆತ್ಮಹತ್ಯೆ ಅಲ್ಲ ಎಂದು ನಮ್ರತಾ ಅವರ ಸಹೋದರ ಡಾ.ವಿಶಾಲ್ ಸುಂದರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಮ್ರತಾ ಲಾರ್ಕಾನಾದ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಳು. ನಮ್ರತಾ ಅವರ ದೇಹವು ಹಾಸ್ಟೆಲ್ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದಿದ್ದು, ಅವರ ಕುತ್ತಿಗೆಗೆ ಹಗ್ಗ ಸುತ್ತಿದ್ದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. 


ಬೆಳಿಗ್ಗೆ, ನಮ್ರತಾಳ ಸ್ನೇಹಿತರು ಅವಳ ಕೋಣೆಯ ಬಾಗಿಲು ತಟ್ಟಿದರೂ ಕೆಲ ಸಮಯದವರೆಗೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಗಮಿಸಿದ ಬಳಿಕ ಬಾಗಿಲು ಮುರಿದು ಕೋಣೆಗೆ ಪ್ರವೇಶಿಸಲಾಗಿದ್ದು, ಕೋಣೆಯಲ್ಲಿ ನಮ್ರತಾ ಶವ ಪತ್ತೆಯಾಗಿದೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ಘಟನೆಯ ತನಿಖೆ ನಡೆಸುವಂತೆ ಲಾರ್ಕಾನಾ ಡಿಐಜಿ ಇರ್ಫಾನ್ ಅಲಿ ಬಲೂಚ್ ಎಸ್‌ಎಸ್‌ಪಿ ಮಸೂದ್ ಅಹ್ಮದ್ ಬಂಗಾಶ್ ಅವರಿಗೆ ಆದೇಶಿಸಿದ್ದಾರೆ. ಅದೇ ಸಮಯದಲ್ಲಿ, ದಂತ ಕಾಲೇಜಿನ ಕುಲಪತಿ ಡಾ.ಅನಿಲಾ ಅಟೌರ್ ರಹಮಾನ್, 'ಈ ಘಟನೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತೋರುತ್ತದೆ, ಆದರೆ ಪೋಸ್ಟ್‌ಮಾರ್ಟಂ ನಂತರ ಸಾವಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.


ಕೆಲವು ದಿನಗಳ ಹಿಂದೆ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಸಿಂಧ್‌ನ ಘೋಟ್ಕಿ ಪ್ರದೇಶವು ಮುಖ್ಯಾಂಶಗಳಲ್ಲಿತ್ತು. ಸೆಪ್ಟೆಂಬರ್ 15 ರಂದು ಘೋಟ್ಕಿಯಲ್ಲಿಯೇ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸ ಮಾಡಲಾಯಿತು.