ಕರಾಚಿ: ಪಾಕಿಸ್ತಾನದ ಲಾರ್ಕಾನಾ ಪ್ರದೇಶದಲ್ಲಿ ಬೀಬಿ ಆಸಿಫಾ ಡೆಂಟಲ್ ಕಾಲೇಜಿನ ಹಾಸ್ಟೆಲ್ ಕೋಣೆಯೊಳಗೆ ಶವವಾಗಿ ಪತ್ತೆಯಾಗಿದ್ದ ಹಿಂದೂ ವೈದ್ಯಕೀಯ ವಿದ್ಯಾರ್ಥಿನಿ ನಮೃತ ಚಂದಾನಿ ಸಾವು ನೆರೆಯ ದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಘಟನೆಯ ಕುರಿತು ಮಂಗಳವಾರ ಕರಾಚಿಯ ಬೀದಿಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಜನರು ಭಾಗವಹಿಸಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಲಾರ್ಕಾನಾದ ಬೀಬಿ ಆಸಿಫಾ ಡೆಂಟಲ್ ಕಾಲೇಜಿನ ಹಾಸ್ಟೆಲ್ ಕೋಣೆಯೊಳಗೆ ವೈದ್ಯಕೀಯ ವಿದ್ಯಾರ್ಥಿನಿ ನಿಗೂಢ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ  ಶಂಕಿಸಲಾಗಿದ್ದರೂ, ಪೊಲೀಸರು ಎಲ್ಲಾ ಆಯಾಮಗಳಲ್ಲೂ ಪರಿಶೀಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. 



ಮೃತ ನಮೃತ ಚಂದಾನಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕಿರುವ ಮೃತರ ಕುಟುಂಬ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ. ಮೃತರ ಸಹೋದರ ಡಾ. ವಿಶಾಲ್ ಸುಂದರ್, ತನ್ನ ಸಹೋದರಿಯನ್ನು ಕೊಲೆ ಮಾಡಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.


ನಮ್ರತಾ ಲಾರ್ಕಾನಾದ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಳು. ನಮ್ರತಾ ಅವರ ದೇಹವು ಹಾಸ್ಟೆಲ್ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದಿದ್ದು, ಅವರ ಕುತ್ತಿಗೆಗೆ ಹಗ್ಗ ಸುತ್ತಿದ್ದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. 


ಬೆಳಿಗ್ಗೆ, ನಮ್ರತಾಳ ಸ್ನೇಹಿತರು ಅವಳ ಕೋಣೆಯ ಬಾಗಿಲು ತಟ್ಟಿದರೂ ಕೆಲ ಸಮಯದವರೆಗೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಗಮಿಸಿದ ಬಳಿಕ ಬಾಗಿಲು ಮುರಿದು ಕೋಣೆಗೆ ಪ್ರವೇಶಿಸಲಾಗಿದ್ದು, ಕೋಣೆಯಲ್ಲಿ ನಮ್ರತಾ ಶವ ಪತ್ತೆಯಾಗಿದೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ಘಟನೆಯ ತನಿಖೆ ನಡೆಸುವಂತೆ ಲಾರ್ಕಾನಾ ಡಿಐಜಿ ಇರ್ಫಾನ್ ಅಲಿ ಬಲೂಚ್ ಎಸ್‌ಎಸ್‌ಪಿ ಮಸೂದ್ ಅಹ್ಮದ್ ಬಂಗಾಶ್ ಅವರಿಗೆ ಆದೇಶಿಸಿದ್ದಾರೆ. ಅದೇ ಸಮಯದಲ್ಲಿ, ದಂತ ಕಾಲೇಜಿನ ಕುಲಪತಿ ಡಾ.ಅನಿಲಾ ಅಟೌರ್ ರಹಮಾನ್, 'ಈ ಘಟನೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತೋರುತ್ತದೆ, ಆದರೆ ಪೋಸ್ಟ್‌ಮಾರ್ಟಂ ನಂತರ ಸಾವಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.


ಕೆಲವು ದಿನಗಳ ಹಿಂದೆ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಸಿಂಧ್‌ನ ಘೋಟ್ಕಿ ಪ್ರದೇಶವು ಮುಖ್ಯಾಂಶಗಳಲ್ಲಿತ್ತು. ಸೆಪ್ಟೆಂಬರ್ 15 ರಂದು ಘೋಟ್ಕಿಯಲ್ಲಿಯೇ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸ ಮಾಡಲಾಯಿತು.


ಈ ಪ್ರದೇಶದಲ್ಲಿ ಹಿಂದೂ ಧರ್ಮದ ಶಾಲಾ ಪ್ರಾಂಶುಪಾಲರ ವಿರುದ್ಧ ಧರ್ಮನಿಂದೆಯ ಆರೋಪದ ನಂತರ, ದೇವಾಲಯಗಳು, ಅಂಗಡಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮನೆಗಳನ್ನು ಗಲಭೆಕೋರರು ಧ್ವಂಸ ಮಾಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಗಲಭೆಕೋರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಘೋಟ್ಕಿಯನ್ನು ಹೊರತುಪಡಿಸಿ ಮಿರ್ಪುರ್ ಮ್ಯಾಥೆಲೊ ಮತ್ತು ಆದಿಲ್ಪುರದಂತಹ ಪಟ್ಟಣಗಳಲ್ಲಿಯೂ ಹಿಂಸಾಚಾರ ಸಂಭವಿಸಿದೆ ಎಂದು ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ವರದಿಯಲ್ಲಿ ತಿಳಿಸಿದೆ.