ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ
ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸಿದರು.
ಇಸ್ಲಾಮಾಬಾದ್: ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರು ಅಧ್ಯಕ್ಷರ ಭವನದಲ್ಲಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಪಾಕಿಸ್ತಾನದ ಅಧ್ಯಕ್ಷ ಮಾಮ್ನೂನ್ ಪ್ರಮಾಣವಚನ ಬೋಧಿಸಿದರು.
ಈ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶುಕ್ರವಾರ ನಡೆದ ಪ್ರಧಾನಿ ಆಯ್ಕೆ ಮತದಾನದಲ್ಲಿ ಇಮ್ರಾನ್ ಖಾನ್ ಅವರು 176 ಮತ ಪಡೆದರೆ, ಅವರ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಷ್ ಷರೀಫ್‌ಪಕ್ಷದ ಹಿರಿಯ ರಾಜಕಾರಣಿ ಶಹಬಾಜ್ ಷರೀಫ್ 96 ಮತ ಪಡೆದಿದ್ದರು. 54 ಸದಸ್ಯರನ್ನು ಹೊಂದಿರುವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತದಾನದಿಂದ ದೂರ ಉಳಿದಿತ್ತು.