ಭಾರತ/ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಶುಕ್ರವಾರ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಭೇಟಿ ನೀಡಿದ್ದಾರೆ. ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮತ್ತು ಕಾಶ್ಮೀರದ ವಿಶೇಷ ಸಮಿತಿಯ ಅಧ್ಯಕ್ಷ ಸೈಯದ್ ಫಖರ್ ಇಮಾಮ್ ಸಾಥ್ ನೀಡಿದರು.


COMMERCIAL BREAK
SCROLL TO CONTINUE READING

ಪಾಕಿಸ್ತಾನದ ರಕ್ಷಣಾ ಮತ್ತು ಹುತಾತ್ಮರ ದಿನದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಈ ಭೇಟಿ ನೀಡಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಇಮ್ರಾನ್ ಖಾನ್ ಅವರಿಗೆ "ಎಲ್‌ಒಸಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ವಿವರಿಸಲಾಗಿದೆ" ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಪಾಕ್ ಸೈನಿಕರು ಮತ್ತು ಮೃತ ಸೈನಿಕರ ಕುಟುಂಬಗಳೊಂದಿಗೆ ಸಂವಹನ ನಡೆಸಿದರು ಎನ್ನಲಾಗಿದೆ.


ಪಾಕಿಸ್ತಾನ-ಆಕ್ರಮಿತ-ಕಾಶ್ಮೀರ (ಪಿಒಕೆ) ಯಲ್ಲಿ ಭಾರತವು ಯಾವುದೇ ಮಿಲಿಟರಿ ಕ್ರಮ ಕೈಗೊಂಡರೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಮ್ಮ ದೇಶದ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ಕೆಲವು ದಿನಗಳ ಹಿಂದೆ ಖಾನ್ ಸ್ಪಷ್ಟಪಡಿಸಿದ್ದಾರೆ.


370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿದೆ.


ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ವಿಶ್ವದಾದ್ಯಂತದ ಹಲವು ದೇಶಗಳು ಬೆಂಬಲಿಸಿವೆ. ಅಲ್ಲದೆ ಇದು ದ್ವಿಪಕ್ಷೀಯ ವಿಷಯ ಎಂದು ಒತ್ತಿ ಹೇಳುವ ಮೂಲಕ ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿವೆ.


ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುತ್ತಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರ ಪಾಕಿಸ್ತಾನ ಸರ್ಕಾರವನ್ನು ಕೆರಳಿಸುತ್ತಿದೆ.


ನೆರೆಯ ರಾಷ್ಟ್ರ ಪಾಕಿಸ್ತಾನ ಈ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕದ ತಟ್ಟಿತಾದರೂ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಪಾಕಿಸ್ತಾನ ಯುಎನ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ.


ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಅಥವಾ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಸೂಚಿಸುವ ವರದಿಗಳನ್ನು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ಪ್ರದೇಶಕ್ಕೆ ಸಾಮಾನ್ಯ ಸ್ಥಿತಿಗೆ ಮರಳುವ ಸಂಕೇತವಾಗಿ, ಶಾಲೆಗಳು, ಇತರ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಹಲವಾರು ಸ್ಥಳಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.