ಕಾಶ್ಮೀರ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ `ಮಧ್ಯಸ್ಥಿಕೆ ಕಾರ್ಡ್` ಫೇಲ್; ಟ್ರಂಪ್ ಏನಂದ್ರು?
ಭಾರತ ಬಯಸದಿದ್ದರೆ ಕಾಶ್ಮೀರ ವಿಚಾರವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗವಾಗಿದೆ.
ನ್ಯೂಯಾರ್ಕ್: ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ 'ಮಧ್ಯಸ್ಥಿಕೆ ಕಾರ್ಡ್' ವಿಫಲವಾಗಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಲವಾದ ಹೊಡೆತವನ್ನು ನೀಡಿ, ಭಾರತವು ಬಯಸದಿದ್ದರೆ ಕಾಶ್ಮೀರ ವಿಷಯವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗವಾಗಿದೆ.
ನ್ಯೂಯಾರ್ಕ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಇಮ್ರಾನ್ ಖಾನ್ ಕಾಶ್ಮೀರದ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಭಾರತ ಬಯಸಿದರಷ್ಟೇ ಮಧ್ಯಸ್ಥಿಕೆ ವಹಿಸುವುದಾಗಿ ಸಂಕ್ಷಿಪ್ತ ಉತ್ತರ ನೀಡಿದರು. ವಿಶೇಷವೆಂದರೆ, ಕಾಶ್ಮೀರದ ವಿಷಯದಲ್ಲಿ ಭಾರತವು ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಅಗತ್ಯವಿಲ್ಲ, ಇದು ನಮ್ಮ ದೇಶದ ಆಂತರಿಕ ವಿಚಾರ ಎಂದು ಹಲವು ಬಾರಿ ಹೇಳಿದೆ. ದ್ವಿಪಕ್ಷೀಯ ಮಾತುಕತೆಗೆ ಆದ್ಯತೆ ನೀಡಬೇಕು ಎಂದಿದೆ.
"ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ಇಬ್ಬರೂ ನನ್ನ ಉತ್ತಮ ಸ್ನೇಹಿತರು. ಕಾಶ್ಮೀರ ಸಮಸ್ಯೆ ಜಟಿಲವಾಗಿದೆ. ಎರಡೂ ಕಡೆಯವರು ಸಿದ್ಧರಾದರೆ ಮಾತ್ರ ನಾನು ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರೊಂದಿಗಿನ ಭೇಟಿಯ ವೇಳೆ, ಕಾಶ್ಮೀರ ವಿಷಯದಲ್ಲಿ ಭಾರತ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ಇಮ್ರಾನ್ ಖಾನ್ ತಮ್ಮ ಅಳಲು ತೋಡಿಕೊಂಡಿದ್ದು, ಇದು ದೊಡ್ಡ ಬಿಕ್ಕಟ್ಟಿನ ಆರಂಭ ಎಂದು ವ್ಯಾಖ್ಯಾನಿಸಿದ್ದಾರೆ. ಈ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕದ ಮಧ್ಯಸ್ಥಿಕೆಯನ್ನು ನಾವು ಎದುರು ನೋಡುತ್ತೇವೆ ಎಂದು ಇಮ್ರಾನ್ ತಿಳಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ಮಾತುಕತೆಗೆ ಸಂಬಂಧಿಸಿದಂತೆ, ಭಾರತವು ತನ್ನ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಿದೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಗಡಿಯುದ್ದಕ್ಕೂ ನಿಲ್ಲಿಸದ ಹೊರತು ಮಾತುಕತೆ ನಡೆಯಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನೂ ಕೂಡ ಹಲವು ಬಾರಿ ರವಾನಿಸಿದೆ.
ಈ ಹಿಂದೆ ಪಿಎಂ ನರೇಂದ್ರ ಮೋದಿ ಭಯೋತ್ಪಾದನೆ ಕುರಿತು ಪಾಕಿಸ್ತಾನ ವಿಚಾರಣೆ ನಡೆಸಿದ್ದರು. ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಯುದ್ಧವನ್ನು ಮಾಡಬೇಕಾಗಿದೆ ಎಂದು ಹ್ಯೂಸ್ಟನ್‌ನಲ್ಲಿ ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ಹ್ಯೂಸ್ಟನ್‌ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಹೆಸರಿಸದೆ ಭಯೋತ್ಪಾದನೆಯನ್ನು ಗುರಿಯಾಗಿಸಿ ವಾಗ್ಧಾಳಿ ನಡೆಸಿದ್ದರು. ಭಯೋತ್ಪಾದನೆ ಮತ್ತು ಅದನ್ನು ಉತ್ತೇಜಿಸುವವರ ವಿರುದ್ಧ ಈಗ ನಿರ್ಣಾಯಕ ಯುದ್ಧವನ್ನು ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.