ಭಾರತವು ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ನಡೆಸಿದೆ: ಪಾಕ್ ವಿದೇಶಾಂಗ ಸಚಿವ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಉಗ್ರ ನೆಲೆಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ಸುಮಾರು 3:30 ರ ಸುಮಾರಿಗೆ ಭಾರತ ದಾಳಿ ನಡೆಸಿತ್ತು.
ಇಸ್ಲಾಮಾಬಾದ್: ಭಾರತವು ನಮ್ಮ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಮಂಗಳವಾರ ಹೇಳಿದ್ದಾರೆ.
"ಭಾರತ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದೇ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡುವ ಹಕ್ಕು ಪಾಕಿಸ್ತಾನಕ್ಕಿದೆ. ಸ್ವರಕ್ಷಣೆಗಾಗಿ ಪಾಕಿಸ್ತಾನವೂ ಸೂಕ್ತ ಪ್ರತಿಕ್ರಿಯೆ ನೀಡಬೇಕಾಗುತ್ತದೆ" ಎಂದು ಖುರೇಷಿ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಉಗ್ರ ನೆಲೆಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ಸುಮಾರು 3:30 ರ ಸುಮಾರಿಗೆ ಭಾರತ ದಾಳಿ ನಡೆಸಿತ್ತು. ಈ ವೈಮಾನಿಕ ದಾಳಿಯನ್ನು ಜೈಷ್ ಅಡಗುದಾಣವನ್ನೇ ಗುರಿಯಾಗಿಸಿಕೊಂಡು ಮಾಡಲಾಗಿತ್ತು. ಈ ಬೆನ್ನಲೇ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ ಪ್ರತಿಕ್ರಿಯಿಸಿದ್ದಾರೆ. ಮೂಲಗಳ ಪ್ರಕಾರ, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ಈ ದಾಳಿಗೆ ಸಂಬಂಧಿಸಿದಂತೆ ಇದು ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಪಾಕ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿ ನಡೆಸಿದ 12 ದಿನಗಳ ಬಳಿಕ ಭಾರತೀಯ ವಾಯುಸೇನೆ ಇಂದು ಬೆಳಿಗ್ಗೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಪುಲ್ವಾಮಾದಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದರು.