Viral Video: ಪಾಕಿಸ್ತಾನದ ಶಾಲೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ; `ಫಿರ್ ಭಿ ದಿಲ್ ಹೇ ಹಿಂದೂಸ್ತಾನಿ` ಎಂದ ಮಕ್ಕಳು!
ಪಾಕಿಸ್ತಾನದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮಕ್ಕಳು ಭಾರತೀಯ ತ್ರಿವರ್ಣ ಧ್ವಜದ ಹಿನ್ನೆಲೆಯಲ್ಲಿ `ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ` ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿ 40ಕ್ಕೂ ಅಧಿಕ ಯೋಧರನ್ನು ಬಲಿ ತೆಗೆದುಕೊಂಡಿದೆ. ಆದರೆ, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮಕ್ಕಳು ಭಾರತೀಯ ತ್ರಿವರ್ಣ ಧ್ವಜದ ಹಿನ್ನೆಲೆಯಲ್ಲಿ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ 'ಮಾಮಾ ಬೇಬಿ ಕೇರ್ ಕೆಂಬ್ರಿಡ್ಜ್ ಶಾಲೆ'ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಭಾರತೀಯ ಹಾಡಿಗೆ ನೃತ್ಯ ಮಾಡಿ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು. ಆದರೆ ಇದನ್ನು ಅಪರಾಧ ಎಂದು ಪರಿಗಣಿಸಿದ ಪಾಕ್ ಸರ್ಕಾರ ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡಿ, ಪಾಕ್ ಘನೆತೆ ಧಕ್ಕೆ ಉಂಟುಮಾಡಿದೆ ಎಂಬ ಆರೋಪದ ಮೇಲೆ ಆ ಶಾಲೆಯ ನೋಂದಣಿಯನ್ನೇ ರದ್ದು ಮಾಡಿದೆ.
ಈ ಘಟನೆ ಕಳೆದ ವಾರ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಡ್ಯಾನ್ಸ್ ವೀಡಿಯೋ ವೈರಲ್ ಆಗಿತ್ತಲ್ಲದೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದನ್ನು ಗಮನಿಸಿದ ಡೈರೆಕ್ಟೋರೇಟ್ ಆಫ್ ಇನ್ಸ್ಪೆಕ್ಷನ್ ಅಂಡ್ ರಿಜಿಸ್ಟ್ರೆಷನ್ ಆಫ್ ಪ್ರೈವೇಟ್ ಇನ್ಸ್ಟಿಟ್ಯೂಶನ್ಸ್ ಸಿಂಧ್(DIRPIS) ಶಾಲೆಗೆ ಶೋಕಾಸ್ ನೋಟೀಸ್ ಜಾರಿಮಾಡಿದ್ದು, ವಿವರಣೆ ನೀಡುವಂತೆ ಸೂಚಿಸಿ ತಾತ್ಕಾಲಿಕವಾಗಿ ನೋಂದಣಿ ರದ್ದುಮಾಡಿದೆ.