ಸಾನ್ಯಾ : ಈ ಬಾರಿಯ ವಿಶ್ವ ಸುಂದರಿ 2017 ಕಿರೀಟವು ಭಾರತದ ಮಾನುಷಿ ಛಿಲ್ಲರ್‌ ಅವರಿಗೆ ಒಲಿದಿದೆ.


COMMERCIAL BREAK
SCROLL TO CONTINUE READING

ಶನಿವಾರ ರಾತ್ರಿ ಚೀನಾದ ಸ್ಯಾನ್ಯಾ ಸಿಟಿ ಅರೆನಾದಲ್ಲಿ ಆಯೋಜಿಸಿದ್ದ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ 108 ರಾಷ್ಟಗಳ ಸುಂದರಿಯರಿಗೆ ಸ್ಪರ್ಧೆಯೊಡ್ಡುವ ಮೂಲಕ ಭಾರತದ ಹರಿಯಾಣದ 20 ವರ್ಷ ವಯಸ್ಸಿನ ಮಾನುಷಿ ಛಿಲ್ಲರ್‌ ವಿಶ್ವ ಸುಂದರಿ 2017 ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಸ್ಪರ್ಧೆಯ ಅಗ್ರ ಐದನೇ ಸ್ಥಾನಕ್ಕೆ ತಲುಪಿದ ನಂತರ, ಪ್ರಶ್ನೆ ಮತ್ತು ಉತ್ತರದ ಸುತ್ತಿನ ಸಂದರ್ಭದಲ್ಲಿ ಛಿಲ್ಲರ್‌ ಅವರಿಗೆ ''ಯಾವ ವೃತ್ತಿಯು ಅತ್ಯಧಿಕ ವೇತನಕ್ಕೆ ಅರ್ಹ ಮತ್ತು ಏಕೆ?'' ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮಾನುಷಿ ಛಿಲ್ಲರ್‌ ಅವರು, ಸಂಬಳದ ಪ್ರಶ್ನೆ ಅಲ್ಲ ಆದರೆ ಅತೀ ಹೆಚ್ಚು ಗೌರವ ಗಳಿಸುವವಳು ತಾಯಿ'' ಎಂದು ಉತ್ತರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ವಿಶ್ವ ಸುಂದರಿ ಪಟ್ಟದೊಂದಿಗೆ ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮದಾಗಿಸಿಕೊಂಡಿದ್ದಾರೆ.


ಇದರೊಂದಿಗೆ ಮಿಸ್ ಇಂಗ್ಲೆಂಡ್ ಸ್ಟೆಫನಿ ಹಿಲ್ ಮೊದಲ ರನ್ನರ್ ಅಪ್ ಮತ್ತು  ಮಿಸ್ ಮೆಕ್ಸಿಕೊದ ಆಂಡ್ರಿಯಾ ಮೆಝಾ ಎರಡನೇ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಾರೆ. ಮಿಸ್ ವರ್ಲ್ಡ್ 2016 ವಿಜೇತೆ ಪೋರ್ಟೊ ರಿಕೊ ಸ್ಟೆಫನಿ ಡೆಲ್ ವ್ಯಾಲೆ ಅವರು ವಿಜೇತರಿಗೆ ಕಿರೀಟವನ್ನು ತೊಡಿಸಿದರು.



ಭಾರತಕ್ಕೆ ಹೆಮ್ಮೆಯ ವಿಶ್ವ ಸುಂದರಿ ಪ್ರಶಸ್ತಿಯನ್ನು ತಂದುಕೊಟ್ಟ ಮಾನುಷಿ ಛಿಲ್ಲರ್‌ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.



2000ನೇ ಇಸವಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ಗಳಿಸಿದ್ದರು. ಇದಾದ 17 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದುಕೊಂಡಿದೆ. ಈ ಹಿಂದೆ ಐಶ್ವರ್ಯಾ ರೈ ಮತ್ತು ಡಯಾನಾ ಹೇಡನ್ ಅವರು ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದರು.