ನವದೆಹಲಿ: ಕೊರೊನಾವೈರಸ್ ಹಿನ್ನಲೆಯಲ್ಲಿ ಜಾಗತಿಕ ಒತ್ತಡಕ್ಕೆ ಒಳಗಾಗಿರುವ ಚೀನಾ ದೇಶ ಈಗ ಯುದ್ಧಕ್ಕೆ ಸಿದ್ದತೆಯನ್ನು ನಡೆಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ದೇಶದ ರಾಷ್ಟ್ರೀಯ ಭದ್ರತೆಯ ಮೇಲೆ ಗೋಚರಿಸುವ ಪರಿಣಾಮದ ನಡುವೆ ಚೀನಾದ ಸಶಸ್ತ್ರ ಪಡೆಗಳಿಗೆ ಸೈನ್ಯದ ತರಬೇತಿಯನ್ನು ಬಲಪಡಿಸಲು ಹಾಗೂ ಯುದ್ಧಕ್ಕೆ ಸಿದ್ಧರಾಗಿರುವಂತೆ ಚೀನಾದ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ ಎನ್ನುವ ಚೀನಾ ಮಾಧ್ಯಮದ ಹೇಳಿಕೆಯನ್ನು ಹಿಂದುಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿದೆ.


'ಸೈನ್ಯದ ತರಬೇತಿಯನ್ನು ಸಮಗ್ರವಾಗಿ ಬಲಪಡಿಸುವುದು ಮತ್ತು ಯುದ್ಧಕ್ಕೆ ಸಿದ್ಧತೆ ನಡೆಸುವುದು, ಆ ಮೂಲಕ ರಾಷ್ಟ್ರೀಯ ಸಾರ್ವಭೌಮತ್ವವನ್ನು  ಮತ್ತು ದೇಶದ ಒಟ್ಟಾರೆ ಕಾರ್ಯತಂತ್ರದ ಸ್ಥಿರತೆಯನ್ನು ಕಾಪಾಡುವುದಾಗಿದೆ' ಎನ್ನುವ ಚೀನಾದ ಪ್ರಧಾನ ಮಂತ್ರಿ ಹೇಳಿಕೆಯನ್ನು ಮಾಧ್ಯಮಗಳು ಉಲ್ಲೇಖಿಸಿವೆ.


ಅಮೆರಿಕದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನಲೆ ನಡುವೆ ಈಗ ಚೀನಾದ ಅಧ್ಯಕ್ಷರ ನಿರ್ದೇಶನ ಬಂದಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ, ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ, ಕೆಲವು ಯುಎಸ್ ರಾಜಕಾರಣಿಗಳು ಸಾಂಕ್ರಾಮಿಕ ರೋಗಕ್ಕೆ ಚೀನಾವನ್ನು ದೂಷಿಸಲು ಮಾಡಿದ ಪ್ರಯತ್ನಗಳನ್ನು ತೀವ್ರವಾಗಿ ಟೀಕಿಸಿದರು.ಚೀನಾದೊಂದಿಗಿನ ಯುಎಸ್ ಸಂಬಂಧವು ಚೀನಾವನ್ನು ಹೊಸ ಶೀತಲ ಸಮರದ ಅಂಚಿಗೆ ತಳ್ಳುತ್ತಿದೆ ಎಂದು ವಾಂಗ್ ಆರೋಪಿಸಿದ್ದರು.


ಇನ್ನೊಂದೆಡೆಗೆ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ದೇಶಗಳ ಸೈನಿಕರು ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.ಎರಡೂ ಸೈನ್ಯಗಳು ಗಡಿಯುದ್ದಕ್ಕೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿವೆ ಎಂದು ಹೇಳಲಾಗುತ್ತದೆ.